ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ 'ಬಿಗ್ ಬಾಸ್' ಕೂಡ ಒಂದು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುವ ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈವರೆಗೆ ಒಂಬತ್ತು ಸೀಸನ್ಗಳನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್ ಬಾಸ್ ಇದೀಗ ಮತ್ತೆ ಬಂದಿದೆ. ಬಿಗ್ ಬಾಸ್ 10ನೇ ಸೀಸನ್ ಶೀಘ್ರವೇ ಪ್ರಾರಂಭವಾಗಲಿದೆ. ನಿನ್ನೆ ಕಿಚ್ಚನ ಹುಟ್ಟುಹಬ್ಬದಂದು ಹೊಸ ಸೀಸನ್ನ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಈ ಹಿಂದಿನ ಎಲ್ಲಾ ಸೀಸನ್ಗಿಂತ ಈ ಬಾರಿಯ ಬಿಗ್ ಬಾಸ್ ಸಂಥಿಂಗ್ ಸ್ಪೆಷಲ್ ಆಗಿರಲಿದೆ ಎಂದು ಪ್ರೋಮೋದಲ್ಲಿ ಹೇಳಲಾಗಿದೆ.
ಈ ಬಾರಿ ಸಂಥಿಂಗ್ ಸ್ಪೆಷಲ್.. ಹೌದು, ಬಿಗ್ ಬಾಸ್ ಸೀಸನ್ 10ರ ಪ್ರೋಮೋ ಕುತೂಹಲ ಮೂಡಿಸಿದೆ. ಏಕೆಂದರೆ ಬಿಗ್ ಬಾಸ್ ಮನೆಯಲ್ಲಿ ಕ್ಯಾಮರಾಗಳನ್ನಿಟ್ಟು ಸ್ಪರ್ಧಿಗಳ ಚಲನ ವಲನ, ಅವರ ಮಾತುಗಳನ್ನು ಈವರೆಗೆ ಪ್ರೇಕ್ಷಕರಿಗೆ ತೋರಿಸಲಾಗುತ್ತಿತ್ತು. ಎಲ್ಲಾ ಸೀಸನ್ಗಳ ಪ್ರೋಮೋಗಳು ಕೂಡ ಹೀಗೆಯೇ ಇರುತ್ತಿತ್ತು. ಆದರೆ ಇದೀಗ ಬಿಡುಗಡೆಯಾಗಿರುವ ಪ್ರೋಮೋ ತುಸು ಭಿನ್ನವಾಗಿದೆ. ಈ ಬಾರಿ ರಿಯಾಲಿಟಿ ಶೋ ಸಂಥಿಂಗ್ ಸ್ಪೆಷಲ್ ಆಗಿರಲಿದೆ. ಪ್ರೋಮೋದಲ್ಲಿ ಮನೆಯೊಳಗಿನ ಕ್ಯಾಮರಾದ ಬದಲಿಗೆ ರಸ್ತೆಯಲ್ಲಿನ ಕ್ಯಾಮರಾಗಳನ್ನು ತೋರಿಸಲಾಗಿದೆ.
ರಸ್ತೆಯಲ್ಲಿ ಕಟ್ಟಡಗಳಿಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳನ್ನು ತೋರಿಸಿ, ರಸ್ತೆಯಲ್ಲಿ ಓಡಾಡುವ ವ್ಯಕ್ತಿಗಳ ದೃಶ್ಯಗಳನ್ನು ಸೆರೆ ಹಿಡಿದು ಪ್ರೋಮೋವನ್ನು ಕೊಂಚ ಡಿಫರೆಂಟ್ ಆಗಿಯೇ ತೋರಿಸಲಾಗಿದೆ. ಅಲ್ಲದೇ ಪ್ರೋಮೋದ ಹಿನ್ನಲೆ ಧ್ವನಿಯಲ್ಲಿ, "ನಮಸ್ತೆ ಕರ್ನಾಟಕ. ಹೇಗಿದ್ದೀರಾ? ನನ್ನ ಮಿಸ್ ಮಾಡ್ಕೊಂಡ್ರಾ? ಇಟ್ಟ ನೋಟ ಗಟ್ಟಿಯಾಗಿದೆ. ಆಟ ಮತ್ತೆ ಶುರುವಾಗ್ತಿದೆ. ಆದ್ರೆ ಈ ಬಾರಿ ಸಂಥಿಂಗ್ ಸ್ಪೆಷಲ್" ಎಂದು ಹೇಳಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.