ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ 'ಬಾಕ್ಸ್ ಆಫೀಸ್ ಬಾಸ್' ಎಂಬ ಮಾತನ್ನು ನಿಜ ಮಾಡಿದ್ದಾರೆ. ಡಿಬಾಸ್ ಅಭಿನಯದ 'ಕಾಟೇರ' ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆಯುವ ಮೂಲಕ ಕನ್ನಡ ಚಿತ್ರರಂಗದ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ.
2023ರ ಡಿಸೆಂಬರ್ 29ರಂದು ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿತು. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುವ ಮೂಲಕ ಮೊದಲನೇ ದಿನವೇ 20 ಕೋಟಿ ರೂ. ಬಾಚಿಕೊಂಡಿತ್ತು. ಮೂರು ದಿನಕ್ಕೆ 58.8 ಕೋಟಿ ರೂ. ಕಲೆಕ್ಷನ್ ಮೂಲಕ ಚಿತ್ರರಂಗದಲ್ಲಿ 'ಕಾಟೇರ' ಹೊಸ ಕ್ರೇಜ್ ಕ್ರಿಯೇಟ್ ಮಾಡಿತ್ತು. ಅಂದಿನಿಂದಲೂ ಕರ್ನಾಟಕದಾದ್ಯಂತ ಈ ಕ್ರೇಜ್ ಹಾಗೇ ಇದೆ. ಇನ್ನೇನು 25 ದಿನಗಳನ್ನು ಪೂರೈಸುವ ಹೊಸ್ತಿಲಲ್ಲಿರುವ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ಅಧ್ಯಾಯ ಬರೆದಿದೆ.
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅಧಿಕೃತವಾಗಿ 'ಕಾಟೇರ' ಕಲೆಕ್ಷನ್ ಬಗ್ಗೆ ಮಾತನಾಡದೇ ಇದ್ದರೂ ಸಿನಿಮಾ ಬಿಡುಗಡೆ ಆದಾಗಿನಿಂದಲೂ ರಾಕ್‌ಲೈನ್ ಪ್ರೊಡಕ್ಷನ್ ಸಂಸ್ಥೆಯು ತನ್ನ ಅಫೀಶಿಯಲ್ ಸೋಷಿಯಲ್ ಮೀಡಿಯಾ ಪೇಜ್ಗಳಲ್ಲಿ ಪ್ರತಿದಿನದ ಕಲೆಕ್ಷನ್ ಜೊತೆಗೆ ಪ್ರೇಕ್ಷಕರ ರೆಸ್ಪಾನ್ಸ್ ಅನ್ನು ಹಂಚಿಕೊಳ್ಳುತ್ತಿದೆ. ಅದೇ ರೀತಿ ಚಿತ್ರ 190 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.
'ಕಾಟೇರ' ಚಿತ್ರತಂಡದವರ ಆಪ್ತರ ಮಾಹಿತಿ ಪ್ರಕಾರ, ಕಳೆದ ಮೂರು ದಿನಗಳಲ್ಲಿ ಒಟ್ಟು 33.47 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಒಟ್ಟು ಕಲೆಕ್ಷನ್ 190.89 ಕೋಟಿ ರೂಪಾಯಿ ಆಗಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಪ್ರಕಟಿಸಲಾಗಿದೆ.
ಕೆಜಿಎಫ್ 1 ಮತ್ತು 2 ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಭಾರತಾದ್ಯಂತ ಕ್ರಮವಾಗಿ 250 ಕೋಟಿ ಮತ್ತು 1,200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಕರ್ನಾಟಕದಲ್ಲಿ ಕೆಜಿಎಫ್ 2 ಚಿತ್ರ 167 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದಾದ ನಂತರ ಬಂದ ಕಾಂತಾರ 185 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಒಟ್ಟಾರೆ ದೇಶಾದ್ಯಂತ 400 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಅದೇ ರೀತಿ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿರುವ ಕಾಟೇರ ಕೇವಲ 20 ದಿನಗಳಲ್ಲಿ 190 ಕೋಟಿ ರೂ.ಗೂ ಹೆಚ್ಚು ದುಡ್ಡು ಮಾಡಿದ್ದು, 200 ಕೋಟಿ ರೂ.ನತ್ತ ಯಶಸ್ವಿಯಾಗಿ ಸಾಗುತ್ತಿರುವುದು 'ದಾಸ'ನ ಅಭಿಮಾನಿ ಬಳಗದ ಸಂತಸಕ್ಕೆ ಕಾರಣವಾಗಿದೆ. ಕರ್ನಾಟಕದ ಮಟ್ಟಿಗೆ ನೋಡಿದರೆ 'ಕಾಟೇರ' 190 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿರುವುದರಿಂದ, ಕೆಜಿಎಫ್ 2 ಮತ್ತು ಕಾಂತಾರ ಎರಡೂ ಚಿತ್ರಗಳ ದಾಖಲೆ ಹಿಂದಿಕ್ಕಿದೆ ಎಂದು ಹೇಳಲಾಗುತ್ತಿದೆ.