ಬೆಂಗಳೂರು: ಯಾವುದೇ ಅಹಂಕಾರವಿಲ್ಲದೇ ಮತ್ತು ಯುದ್ಧವನ್ನೇ ಮಾಡದೇ ಒಂದು ರಾಜ್ಯವನ್ನೇ ಗೆದ್ದಿರುವ ರಾಜಕುಮಾರ ಯಾರಾದರೂ ಇದ್ದರೆ ಅದು ಪುನೀತ್ ರಾಜ್ಕುಮಾರ್ ಮಾತ್ರ ಎಂದು ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್ಟಿಆರ್ ಬಣ್ಣಿಸಿದರು.
ವಿಧಾನಸೌಧ ಮುಂಭಾಗದಲ್ಲಿ ಇಂದು ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರಿಗೆ ಸರ್ಕಾರದಿಂದ ಕರ್ನಾಟಕ ರತ್ನ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಕನ್ನಡದಲ್ಲೇ ಮಾತನಾಡಿದ ಅವರು, ಮೊದಲಿಗೆ ಎಲ್ಲ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಶುಭ ಕೋರಿದರು.
ಒಬ್ಬ ಮನುಷ್ಯನಿಗೆ ಪರಂಪರೆ, ಉಪನಾಮ ಎನ್ನೋದು ಹಿರಿಯರಿಂದ ಬರುತ್ತದೆ. ಆದರೆ, ವ್ಯಕ್ತಿತ್ವ ಎನ್ನೋದು ಒಬ್ಬ ವ್ಯಕ್ತಿಯ ಸ್ವತಃ ಸಂಪಾದನೆ. ಬರೀ ವ್ಯಕ್ತಿತ್ವ, ನಗುವಿನಿಂದ ಹಾಗೂ ಯಾವುದೇ ಅಹಂವಿಲ್ಲದೇ, ಅಹಂಕಾರವಿಲ್ಲದೇ, ಯುದ್ಧವನ್ನೇ ಮಾಡದೇ ಒಂದು ರಾಜ್ಯವನ್ನೇ ಗೆದ್ದಿರುವ ರಾಜಕುಮಾರ ಯಾರಾದರೂ ಇದ್ದರೆ ಅದು ಪುನೀತ್ ರಾಜ್ಕುಮಾರ್ ಒಬ್ಬರೇ ಮಾತ್ರ ಎಂದು ಹೇಳಿದರು.
ಒಂದೇ ರಾಜ್ಯವನ್ನೇ ಗೆದ್ದಿರುವ 'ರಾಜಕುಮಾರ್' ಪುನೀತ್: ಕನ್ನಡದಲ್ಲೇ ಜ್ಯೂ ಎನ್ಟಿಆರ್ ಬಣ್ಣನೆ ಕರ್ನಾಟಕದ ಹೆಮ್ಮೆಯ ಸೂಪರ್ಸ್ಟಾರ್ ಆಗಿ, ಹೆಮ್ಮೆಯ ಮಗ, ಪತಿ, ತಂದೆ, ಗೆಳೆಯ, ನಟ, ಡ್ಯಾನ್ಸರ್, ಗಾಯಕ... ಇದೆಲ್ಲದರ ಜೊತೆಗೆ ಶ್ರೇಷ್ಠ ಹ್ಯೂಮನ್ ಬೀಯಿಂಗ್... ಪುನೀತ್ ಅವರ ನಗುವಿನಲ್ಲಿದ್ದ ಶ್ರೀಮಂತಿಕೆ ನಾನು ಬೇರೆ ಯಾರಲ್ಲೂ ನೋಡೋಕೆ ಆಗಲ್ಲ... ಅದಕ್ಕೆ ಅವರನ್ನು ನಗುವಿನ ಒಡೆಯ ಅನ್ನೋದು ಎಂದು ಎನ್ಟಿಆರ್ ಗುಣಗಾನ ಮಾಡಿದರು.
ಇವತ್ತು ಪುನೀತ್ ಅವರಿಗೆ ಸಿಕ್ಕಿರುವುದು ಕರ್ನಾಟಕ ರತ್ನ ಪ್ರಶಸ್ತಿ... ಆದರೆ, ನನ್ನ ಪ್ರಕಾರ, ದಯವಿಟ್ಟು ತಪ್ಪು ತಿಳಿಯಬೇಡಿ.. ಕರ್ನಾಟಕ ರತ್ನ ಅರ್ಥನೇ ಪುನೀತ್ ರಾಜ್ಕುಮಾರ್... ನಾನು ಈ ವೇದಿಕೆಗೆ ಬಂದಿದ್ದು, ನನ್ನ ಸಾಧನೆಯ ಅರ್ಹತೆಗಳಿಂದ ಅಲ್ಲ. ಕೇವಲ ಒಬ್ಬ ಪುನೀತ್ ಅವರ ಹೆಮ್ಮೆಯ ಗೆಳೆಯನಾಗಿ ನಾನು ಇಲ್ಲಿ ನಿಂತಿದ್ದೇನೆ. ಈ ಕಾರ್ಯಕ್ರಮದ ಒಂದು ಭಾಗವಾಗಲು ನನಗೆ ಅವಕಾಶ ನೀಡಿದ ಕರ್ನಾಟಕ ಸರ್ಕಾರಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಎನ್ಟಿಆರ್ ಹೇಳಿದರು.
ಇದನ್ನೂ ಓದಿ:ಮಳೆ ಸಿಂಚನದ ಮಧ್ಯೆ ಪುನೀತ್ ರಾಜಕುಮಾರ್ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ