'ಚಿ.ತು ಯುವಕರ ಸಂಘ' ಅಧ್ಯಕ್ಷ ಸಿನಿಮಾದಲ್ಲಿ ಶರಣ್ ಮತ್ತು ಚಿಕ್ಕಣ್ಣ ಕಟ್ಟಿದ್ದ ಒಂದು ಸಂಘ. ಇದೀಗ ಅದೇ ಸಂಘದ ಹೆಸರಿಟ್ಟುಕೊಂಡು, 'ಅಧ್ಯಕ್ಷ' ಫ್ಲೇವರ್ನಲ್ಲಿ ಪಕ್ಕಾ ಹಳ್ಳಿ ಶೈಲಿಯಲ್ಲಿ ಔಟ್ ಅಂಡ್ ಔಟ್ ಎಂಟರ್ಟೈನ್ಮೆಂಟ್ ಪ್ಯಾಕೇಜ್ ರೆಡಿ ಆಗಿದೆ. ಕಂಪ್ಲೀಟ್ ಎಂಟರ್ಟೈನ್ಮೆಂಟ್ ಸಿನಿಮಾ ವೀಕ್ಷಿಸಲು ಸಿನಿಪ್ರಿಯರು ಸಹ ಕಾತರರಾಗಿದ್ದಾರೆ.
ಇತ್ತೀಚೆಗಷ್ಟೇ ರಿಲೀಸ್ ಆಗಿರುವ 'ಚಿ.ತು ಯುವಕರ ಸಂಘ' ಟೀಸರ್ ಸಿನಿಪ್ರಿಯರ ಗಮನ ಸೆಳೆದಿದೆ. ಯುಟ್ಯೂಬ್ನಲ್ಲಿ 5 ಲಕ್ಷಕ್ಕೂ ಹೆಚ್ಚು ವೀವ್ಸ್ ಜೊತೆಗೆ ಅತ್ಯುತ್ತಮ ಪ್ರತಿಕ್ರಿಯೆಗಳನ್ನೂ ಪಡೆದುಕೊಂಡಿದೆ. ಸ್ಯಾಂಡಲ್ವುಡ್ ಅಂಗಳದಲ್ಲಿ ಮೂಡಿ ಬರುತ್ತಿರುವ ಸಿನಿಮಾಗಳ ಸಾಲಲ್ಲಿ ನಿರೀಕ್ಷೆ ಜೊತೆ ಭರವಸೆ ಹುಟ್ಟಿಸಿದೆ ಚಿ.ತು ಯುವಕರ ಸಂಘದ ಟೀಸರ್. ಈ ಟೀಸರ್ನಲ್ಲಿ ಎಲ್ಲ ಪಾತ್ರಧಾರಿಗಳನ್ನು ಸ್ಟಾರ್ ಡೈರೆಕ್ಟರ್ ಜೋಗಿ ಪ್ರೇಮ್ ಪರಿಚಯಿಸಿರೋದು ವಿಶೇಷ. ಈ ಮೂಲಕ ಚಿತ್ರತಂಡಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಟೀಸರ್ ಲುಕ್ ಇಂಪ್ರೆಸಿವ್ ಆಗಿದೆ. ಅಧ್ಯಕ್ಷ ಫ್ಲೇವರ್ ಇರೋ ಈ ಚಿತ್ರವನ್ನು ಖುದ್ದು ಅಧ್ಯಕ್ಷ ಶರಣ್ ಅವರೇ ಮೆಚ್ಚಿ ಕೊಂಡಾಡಿದ್ದಾರೆ.
''ಚಿ.ತು ಯುವಕರ ಸಂಘ'' ಸಿನಿಮಾ ಬಗ್ಗೆ ಮಾತನಾಡಿರುವ ಅಧ್ಯಕ್ಷ ಖ್ಯಾತಿಯ ಶರಣ್, ಟೀಸರ್ ಚಿತ್ರದ ಪಾತ್ರ ಮತ್ತು ಕಥೆ ಕುರಿತು ಸಣ್ಣ ಸುಳಿವು ಬಿಟ್ಟುಕೊಟ್ಟಿದೆ. ಬಹಳ ಪಾಸಿಟಿವ್ ಆಗಿ ಕಥೆ, ಟೀಸರ್ ಹೆಣೆದಿದ್ದಾರೆ. ನನಗಂತೂ ಈ ಟೀಸರ್ ಬಹಳಾನೇ ಇಷ್ಟ ಆಯ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಚಿ.ತು ಯುವಕರ ಸಂಘ' ಚಿತ್ರದ ನಾಯಕನಾಗಿ ಸನತ್ ಕಾಣಿಸಿಕೊಂಡಿದ್ದು, ವಿರಾನಿಕ ಶೆಟ್ಟಿ ನಾಯಕಿಯಾಗಿ ಅಭಿನಯಸಿದ್ದಾರೆ. ತುಕಾಲಿ ಸಂತು, ಮಹಂತೇಶ್, ಸಲ್ಮಾನ್, ಕುರಿ ಪ್ರತಾಪ್, ಬಲರಾಜವಾಡಿ, ಬಿರಾದಾರ್ ಸೇರಿದಂತೆ ಹಲವರು ಚಿತ್ರದ ತಾರಾ ಬಳಗದಲ್ಲಿದ್ದಾರೆ.