ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್' ಸಿನಿಮಾ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಕಂಡಿದೆ. ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಪ್ರಕಾರ, ಚಿತ್ರವು ತೆರೆಕಂಡ ಏಳು ದಿನಗಳಲ್ಲಿ 375 ಕೋಟಿ ರೂ. ಗಡಿ ದಾಟುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಸದ್ಯ ಥಿಯೇಟರ್ಗಳಲ್ಲಿ ಸಿನಿಮಾ ಎರಡಂಕಿಯಲ್ಲಿ ಕಲೆಕ್ಷನ್ ಮಾಡುತ್ತಿದ್ದು, ವೇಗದ ಓಟ ಮುಂದುವರೆಸಿದೆ.
ವಿಶ್ವದಾದ್ಯಂತ 375 ಕೋಟಿ ರೂ. ದಾಟಿದ 'ಜೈಲರ್': ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಸಿನಿಮಾ ಆಗಸ್ಟ್ 10 ರಂದು ತೆರೆಗೆ ಅಪ್ಪಳಿಸಿತು. ಈ ಚಿತ್ರವನ್ನು ಭಾರತದ ವಿವಿಧ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಭಾರತದ ಹೊರತಾಗಿಯೂ ಯುಎಇ, ಯುಎಸ್, ಯುಕೆ, ಸಿಂಗಾಪುರ್, ಮಲೇಷ್ಯಾ ಮತ್ತು ವಿಶ್ವದ ಇತರೆ ಭಾಗಗಳಲ್ಲಿಯೂ 'ಜೈಲರ್' ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಶ್ವದಾದ್ಯಂತ 375 ಕೋಟಿ ರೂಪಾಯಿ ದಾಟಿರುವ ಈ ತಮಿಳು ಸಿನಿಮಾ ಈವರೆಗಿನ ಅನೇಕ ದಾಖಲೆಗಳನ್ನು ಸರಿಗಟ್ಟಿವೆ.
8ನೇ ದಿನದ ಕಲೆಕ್ಷನ್:'ಜೈಲರ್' ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುವುದರೊಂದಿಗೆ, ಕಲೆಕ್ಷನ್ ವಿಚಾರದಲ್ಲೂ ವೇಗದ ಓಟ ಮುಂದುವರೆಸಿದೆ. ಉದ್ಯಮದ ಟ್ರ್ಯಾಕರ್ ಸ್ಯಾಕ್ನಿಲ್ ಪ್ರಕಾರ, ಚಿತ್ರವು ಎಂಟನೇ ದಿನ ಭಾರತದ ಬಾಕ್ಸ್ ಆಫೀಸ್ನಲ್ಲಿ ಸರಿಸುಮಾರು 10 ಕೋಟಿ ರೂಪಾಯಿ ಗಳಿಸಿದೆ. ಇದು ಚಿತ್ರ ಬಿಡುಗಡೆಯಾದ ನಂತರ ಅತ್ಯಂತ ಕಡಿಮೆ ಗಳಿಕೆಯಾಗಿದೆ. ಆದರೂ ಬಿಡುಗಡೆಯಾಗಿ ಒಂದು ವಾರ ಕಳೆದರೂ ಎರಡಂಕಿಯಲ್ಲಿ ಚಿತ್ರ ಕಲೆಕ್ಷನ್ ಮಾಡುತ್ತಿರುವುದು ಗಮನಾರ್ಹ. ಇನ್ನು ಭಾರತದಲ್ಲಿ ಈ ಚಿತ್ರವು ಒಟ್ಟು 235.65 ಕೋಟಿಗೂ ಹೆಚ್ಚು ಗಳಿಸಿದೆ.