ಕನ್ನಡ, ತೆಲುಗು ಚಿತ್ರರಂಗದಲ್ಲಿ ಅತ್ಯುತ್ತಮ ಅಭಿನಯದಿಂದ ಸಿನಿಪ್ರಿಯರ ಹೃದಯ ಗೆದ್ದಿರುವ ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್. ಅಭಿನಯದ ಜೊತೆಗೆ ಹೊಸ ಪ್ರತಿಭೆಗಳ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ಧನಂಜಯ್ ಈಗ 'ಹೊಯ್ಸಳ'ನಾಗಿ ಬೆಳ್ಳಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಟೀಸರ್ನಿಂದಲೇ ಸೌಂಡ್ ಮಾಡುತ್ತಿರುವ ಹೊಯ್ಸಳ ಚಿತ್ರದ ಭರ್ಜರಿ ಮಾಸ್ ಸಾಂಗ್ ಒಂದು ಅನಾವರಣಗೊಂಡಿದೆ.
'ಸಳ ಸಳ ಹೊಯ್ಸಳ'ಚಿತ್ರದ ಟೈಟಲ್ ಟ್ರ್ಯಾಕ್ ಇದಾಗಿದ್ದು, ತಮ್ಮ ಅಮೋಘ ಕಂಠದಿಂದ ಜನಪ್ರಿಯರಾಗಿರುವ ನಕಾಶ್ ಅಜೀಜ್ ಅವರು ಈ ಸಾಂಗ್ ಅನ್ನು ಅಮೋಘವಾಗಿ ಹಾಡಿದ್ದಾರೆ. Rapಗೆ ಯೋಗಿ ಬಿ ಧ್ವನಿಯಾಗಿದ್ದಾರೆ. ಸಂತೋಷ್ ಆನಂದ್ ರಾಮ್ ಈ ಹಾಡನ್ನು ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೆಸಿಸಿ ಪಂದ್ಯದ ಸಂದರ್ಭ ಈ ಹಾಡು ಪ್ಲೇ ಆಗಿದೆ. ಕ್ರೀಡಾಂಗಣದಲ್ಲಿದ್ದ ಗಣ್ಯರು ಹಾಗೂ ಪ್ರೇಕ್ಷಕರು ಹಾಡಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಸಾಮಾಜಿಕ ತಾಣದಲ್ಲೂ ಹಾಡಿಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ನಟರಾಕ್ಷಸ ಎಂದೇ ಖ್ಯಾತರಾಗಿರುವ ಡಾಲಿ ಧನಂಜಯ್ ಅವರ 25ನೇ ಸಿನಿಮಾ ಆಗಿರೋ ಹೊಯ್ಸಳ ಚಿತ್ರದಲ್ಲಿ, ಸಲಗ ಚಿತ್ರದ ನಂತರ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಧನಂಜಯ್ ಈ ಚಿತ್ರದಲ್ಲಿ ಗುರುದೇವ ಹೊಯ್ಸಳ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಬೆಳಗಾವಿಯಲ್ಲಿ ನಡೆಯುವ ಒಬ್ಬ ದಿಟ್ಟ ಪೊಲೀಸ್ ಅಧಿಕಾರಿಯ ಸುತ್ತ ನಡೆದಿರುವ ಘಟನೆಯನ್ನು ಆಧರಿಸಿರೋ ಕಥೆಯಾಗಿದೆ.
ಈ ಹಿಂದೆ ಗಣೇಶ್ ನಟನೆಯ ಗೀತಾ ಸಿನಿಮಾವನ್ನು ನಿರ್ದೇಶನ ಮಾಡಿದ್ದ ವಿಜಯ್ ನಾಗೇಂದ್ರ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಬಡವ ರಾಸ್ಕಲ್ ಸಿನಿಮಾ ಬಳಿಕ ಧನಂಜಯ್ ಜೊತೆ ಅಮೃತ ಅಯ್ಯಂಗಾರ್ ಜೋಡಿಯಾಗಿದ್ದಾರೆ. ಇವರ ಜೊತೆಗೆ ಅಚ್ಯುತ್ ಕುಮಾರ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅವಿನಾಶ್ ಕೆ.ಜಿ.ಎಫ್, ರಾಘು ಶಿವಮೊಗ್ಗ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.