ಹೈದರಾಬಾದ್(ತೆಲಂಗಾಣ):ಟಾಪ್ ಫ್ಯಾಷನ್ ಡಿಸೈನರ್ ಪ್ರತ್ಯುಷಾ ಗರಿಮೆಲ್ಲಾ ಹೈದರಾಬಾದ್ನ ಬಂಜಾರಾ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬೆಡ್ರೂಮ್ನಲ್ಲಿ ಕಾರ್ಬನ್ ಮೊನಾಕ್ಸೈಡ್ ಸೇವಿಸಿ ಪ್ರತ್ಯುಷಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮಲಗುವ ಕೋಣೆಯಲ್ಲಿ ಕಾರ್ಬನ್ ಮೊನಾಕ್ಸೈಡ್ ಸಿಲಿಂಡರ್ ಪತ್ತೆಯಾಗಿದ್ದು ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ. ಅನುಮಾನಾಸ್ಪದ ಸಾವು ಪ್ರಕರಣದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಇಲ್ಲಿಯ ಸರ್ಕಲ್ ಇನ್ಸ್‌ಪೆಕ್ಟರ್ ಮಾಹಿತಿ ನೀಡಿದ್ದಾರೆ.
ಪ್ರತ್ಯುಷಾ ಬಂಜಾರ ಹಿಲ್ಸ್‌ನ ಎಂಎಲ್‌ಎ ಕಾಲೋನಿಯಲ್ಲಿ ವಾಸವಾಗಿದ್ದರು. ಪ್ರತ್ಯುಷಾ ಚಿತ್ರರಂಗದ ಸೆಲೆಬ್ರಿಟಿಗಳಿಗೆ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ದೇಶದ ಟಾಪ್ 30 ಫ್ಯಾಷನ್ ಡಿಸೈನರ್‌ಗಳಲ್ಲಿ ಇವರು ಕೂಡ ಒಬ್ಬರಾಗಿದ್ದರು. ಘಟನೆ ಬಗ್ಗೆ ಬಂಜಾರಾ ಹಿಲ್ಸ್ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಿನಿಮಾ ರಂಗದಲ್ಲಿ ಇಂತಹ ಸರಣಿ ಸಾವುಗಳು ನಡೆಯುತ್ತಿದ್ದು, ಈ ಸಾಲಿಗೆ ಇದೀಗ ಈ ಯುವ ತಾರೆ ಸೇರಿಕೊಂಡಿದ್ದಾರೆ. ಇತ್ತೀಚೆಗೆ ನಟಿ ಸಹನಾ, 26 ವರ್ಷದ ಟ್ರಾನ್ಸ್ ಮಾಡೆಲ್ ಕಮ್ ನಟಿ ಶೆರಿನ್ ಸೆಲಿನ್ ಮ್ಯಾಥ್ಯೂ, ಬದುಕಿಗೆ ವಿದಾಯ ಹೇಳಿದ್ದು ನೋವಿನ ಸಂಗತಿ.
ಇದೇ ರೀತಿ ಬಣ್ಣದ ಜಗತ್ತಿನಲ್ಲಿ ಅರಳುವ ಮುನ್ನವೇ ಮುದುಡುತ್ತಿರುವ ತಾರೆಯರ ಬದುಕು ಕಂಡು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.