ನೋಯ್ಡಾ (ನವದೆಹಲಿ): ಜನಪ್ರಿಯ ಯೂಟ್ಯೂಬರ್, ಹಿಂದಿ ಬಿಗ್ ಬಾಸ್ ಒಟಿಟಿ 2ರ ವಿಜೇತ ಎಲ್ವಿಶ್ ಯಾದವ್ ಕಾನೂನು ಹೋರಾಟ ಮುಂದುವರಿಸಿದ್ದಾರೆ. ರೇವ್ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿದ್ದು, ನಿನ್ನೆ ರಾತ್ರಿ ಪೊಲೀಸ್ ಠಾಣೆಯಲ್ಲಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನೋಯ್ಡಾ ಪೊಲೀಸರು ಎಲ್ವಿಶ್ ಯಾದವ್ ಅವರಿಗೆ ಇತ್ತೀಚೆಗಷ್ಟೇ ನೋಟಿಸ್ ಕಳುಹಿಸಿದ್ದರು.
ಎಲ್ವಿಶ್ ಯಾದವ್ ಅವರು ನೋಯ್ಡಾ ಪೊಲೀಸ್ ಠಾಣೆ ಸೆಕ್ಟರ್ 20ಕ್ಕೆ ಆಗಮಿಸಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಇದಕ್ಕೂ ಮುನ್ನ ನೋಯ್ಡಾ ಪೊಲೀಸರು ಎಲ್ವಿಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಿದ್ದರು. ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆದಿದ್ದು, ಪೊಲೀಸರು ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಇದಾದ ನಂತರ ಎಲ್ವಿಶ್ ಅವರಿಗೆ ಹೋಗಲು ಅನುಮತಿ ನೀಡಲಾಯಿತು. ಮತ್ತೆ ವಿಚಾರಣೆ ನಡೆಸಲಾಗುವುದೆಂದು ಕೂಡ ಸೂಚಿಸಿದರು.
ಯಾವ್ಯಾವ ಸ್ಥಳಗಳಲ್ಲಿ ಪಾರ್ಟಿಗಳು ನಡೆಯುತ್ತಿದ್ದವು ಎಂಬ ಪ್ರಶ್ನೆ ಸೇರಿದಂತೆ ಸುಮಾರು 15 ರಿಂದ 20 ಪ್ರಶ್ನೆಗಳನ್ನು ಎಲ್ವಿಶ್ ಯಾದವ್ ಅವರಲ್ಲಿ ಕೇಳಲಾಯಿತು. ಹಾವಿನ ವಿಷ ಬಳಕೆ ಮತ್ತು ಹಾವುಗಳ ಪ್ರದರ್ಶನದ ಬಗ್ಗೆಯೂ ಕೇಳಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಚಾರಣೆ ವೇಳೆ ಎಲ್ವಿಶ್ ಯಾದವ್ ಅವರು ಬಹಳ ಭಯಭೀತರಾಗಿ ಕಾಣಿಸಿಕೊಂಡಿದ್ದು, ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರಂತೆ.