ಈ ವರ್ಷದ ಕ್ರಿಸ್ಮಸ್ ವೇಳೆ ಎರಡು ಸೂಪರ್ಸ್ಟಾರ್ ಸಿನಿಮಾಗಳು ಒಮ್ಮೆಲೇ ತೆರೆಗಪ್ಪಳಿಸಲಿವೆ. ಬಾಲಿವುಡ್ ಕಿಂಗ್ ಶಾರುಖ್ ಖಾನ್ ನಟನೆಯ 'ಡಂಕಿ' ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ 'ಸಲಾರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪೈಪೋಟಿ ನಡೆಸಲಿದೆ. ಆದರೆ, 'ಸಲಾರ್' ಚಿತ್ರದ ಬಗ್ಗೆ ದಿನಕ್ಕೊಂದು ಸುದ್ದಿ ಹೊರಬೀಳುತ್ತಿದೆ. ಸಾಕಷ್ಟು ಬಾರಿ ಈ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿದ್ದು, ಈ ಬಾರಿ ಮತ್ತೊಮ್ಮೆ ಮುಂದೂಡಿಕೆಯಾಗಲಿದೆಯೇ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.
ರಾಧೆಶ್ಯಾಮ್ ಮತ್ತು ಆದಿಪುರುಷ್ನಂತಹ ಹೈ ಬಜೆಟ್ ಸಿನಿಮಾಗಳು ಪ್ಲಾಫ್ ಆದ ನಂತರ ಪ್ರಭಾಸ್ ಅವರ 'ಸಲಾರ್' ಮೇಲೆ ಭಾರೀ ನಿರೀಕ್ಷೆಯಿದೆ. ಈ ಸಿನಿಮಾದ ಯಶಸ್ಸಿಗಾಗಿ ನಟ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಇನ್ನೂ, ಪಠಾಣ್ ಮತ್ತು ಜವಾನ್ನಂತಹ ಬ್ಲಾಕ್ಬಸ್ಟರ್ ನಂತರ ಶಾರುಖ್ ಅವರ ಮುಂಬರುವ ಚಿತ್ರ 'ಡಂಕಿ' ಮೇಲೆ ಎಕ್ಸ್ಪೆಕ್ಟೇಶನ್ಸ್ ಜಾಸ್ತಿನೇ ಇದೆ. ಈ ಎರಡೂ ಸಿನಿಮಾಗಳು ಡಿಸೆಂಬರ್ 22ರಂದೇ ಬಿಡುಗಡೆಗೆ ಸಿದ್ಧವಾಗುತ್ತಿದೆ. ಹೀಗಾಗಿ ಅಭಿಮಾನಿಗಳು ಹೈ ರೇಂಜ್ನಲ್ಲಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ:Salaar vs Dunki: ಟೀಸರ್ ವೀಕ್ಷಣೆಯಲ್ಲಿ 'ಸಲಾರ್' ಮೇಲುಗೈ
ಒಂದು ಕಡೆ, ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ. ಮತ್ತೊಂದೆಡೆ, ರಾಜ್ಕುಮಾರ್ ಹಿರಾನಿ ಅವರ ಸಾಮಾಜಿಕ ಸಂದೇಶ, ಹಾಸ್ಯ ಮತ್ತು ಭಾವನಾತ್ಮಕ ಕಥೆಯನ್ನೊಳಗೊಂಡ 'ಡಂಕಿ' ಬರಲಿದೆ. ಸಲಾರ್ ಬಗ್ಗೆ ಸಾಕಷ್ಟು ಕುತೂಹಲವಿದ್ದರೂ, ಜವಾನ್ ಮತ್ತು ಪಠಾಣ್ ಈಗಾಗಲೇ 1,000 ಕೋಟಿ ಕ್ಲಬ್ ಸೇರಿರುವುದರಿಂದ 'ಡಂಕಿ' ಮೇಲೂ ಇದು ಪರಿಣಾಮ ಬೀರುತ್ತದೆ. ಅಂದರೆ, ಶಾರುಖ್ ಸಿನಿಮಾ ಮೇಲೆ ಜನರಿಗೆ ಹೆಚ್ಚಿನ ನಿರೀಕ್ಷೆಯಿದೆ. ಹೀಗಾಗಿ ಈ ಸಿನಿಮಾಗಳನ್ನು ಒಂದೇ ಬಾರಿಗೆ ಬಿಡುಗಡೆ ಮಾಡುವುದು ಸರಿಯಲ್ಲ. ಇದು ಕಲೆಕ್ಷನ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುತ್ತಾರೆ ಸಿನಿಮಾ ವಿಶ್ಲೇಷಕರು.
ಈ ಕ್ರಮದಲ್ಲಿ, ಬಾಕ್ಸ್ ಆಫೀಸ್ ಘರ್ಷಣೆ ತಪ್ಪಿಸುವ ಸಲುವಾಗಿ ಮತ್ತೊಮ್ಮೆ 'ಸಲಾರ್' ಮುಂದೂಡಿಕೆಗೆ ಸಿದ್ಧವಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಮುಂದಿನ ವರ್ಷ ಜನವರಿ ಅಥವಾ ಮಾರ್ಚ್ನಲ್ಲಿ ಚಿತ್ರ ತೆರೆ ಕಾಣಲಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಒಂದು ವೇಳೆ ಇದು ನಿಜವೇ ಆಗಿದ್ದರೆ, ಶಾರುಖ್ ಖಾನ್ ಡಂಕಿ ಚಿತ್ರದ ಸಕ್ಸಸ್ ಜೊತೆ ಈ ವರ್ಷ ಹ್ಯಾಟ್ರಿಕ್ ಹಿಟ್ನೊಂದಿಗೆ ಕೊನೆಗೊಳ್ಳಲಿದ್ದಾರೆ. ಜೊತೆಗೆ ಪ್ರಭಾಸ್ ಅವರ ಸಲಾರ್ ಸಿನಿಮಾ ಮುಂದಿನ ವರ್ಷ ಬಂದರೆ, ಅವರ ಮತ್ತೊಂದು ನಿರೀಕ್ಷೆಯ ಕಲ್ಲಿ ಕೂಡ ಕೆಲವು ತಿಂಗಳ ಗ್ಯಾಪ್ನಲ್ಲಿ ತೆರೆ ಕಾಣಲಿದೆ. ಹೀಗಾಗಿ ಒಂದೇ ವರ್ಷ ಎರಡು ಬ್ಲಾಕ್ಬಸ್ಟರ್ ಚಿತ್ರಗಳು ಬರಲಿವೆ. ಈ ಎಲ್ಲಾ ವಿಚಾರಗಳ ಬಗ್ಗೆ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಿದೆ.
ಇದನ್ನೂ ಓದಿ:ಡಂಕಿ vs ಸಲಾರ್: ಶಾರುಖ್ ಸಿನಿಮಾ ಟೀಸರ್ ರಿಲೀಸ್ ಬೆನ್ನಲ್ಲೇ ಫ್ಯಾನ್ಸ್ ವಾರ್ ಶುರು - ಟ್ವೀಟ್ಗಳನ್ನೇನಿದೆ?