ಸಿನಿಮಾಗಳಲ್ಲಿ ಲವ್ ಸ್ಟೋರಿ ಜೊತೆಗೆ ಜೀವನದ ಫಿಲಾಸಫಿ ಹೇಳುವ ನಿರ್ದೇಶಕ ಯೋಗರಾಜ್ ಭಟ್. ಈಗ ಗಣೇಶ್, ದಿಗಂತ್ ಹಾಗು ಪವನ್ ಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಗಾಳಿಪಟ-2 ಚಿತ್ರ ನಿರ್ದೇಶಿಸಿರುವ ಭಟ್ರು ಈಟಿವಿ ಭಾರತ ಜೊತೆ ಸವಿಸ್ತಾರವಾಗಿ ಮಾತನಾಡಿದರು.
ಯೋಗರಾಜ್ ಭಟ್ ಅವರಿಗೆ ಗಾಳಿಪಟ ಅಂದ್ರೆ ನೆನಪಾಗೋದು ಸ್ವತಂತ್ರ ಅಂತೆ. ಗಾಳಿಪಟ -1 ಸಿನಿಮಾ ಮಾಡಿದಾಗ್ಲೇ ಪಾರ್ಟ್-2 ಮಾಡುವ ಐಡಿಯಾವೂ ಬಂದಿತ್ತು. ಆ ಮಟ್ಟಿಗೆ ಕಥೆ ಬರೆದು ಕಂಟೆಂಟ್ ರೆಡಿ ಮಾಡಿಕೊಂಡಿದ್ದೆವು. ಗಾಳಿಪಟ ಅಂತಾ ಟೈಟಲ್ ಕೊಟ್ಟಿದ್ದು ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಎಂದು ಭಟ್ರು ಹೇಳಿದರು.
ಗಾಳಿಪಟ ಅಂದಾಕ್ಷಣ ಎಲ್ಲರಿಗೂ ಬಾಲ್ಯ ನೆನಪಾಗುತ್ತೆ. ಹೀಗಾಗಿ ಗಾಳಿಪಟ -1 ಸಿನಿಮಾ ಆ ಮಟ್ಟದ ಸಕ್ಸಸ್ ಆಗಲು ಜನರೇ ಕಾರಣ. ಚಿತ್ರದ ಹಾಡುಗಳು, ಡೈಲಾಗ್ ಫೇಮಸ್ ಆಗಿದ್ದು ಗಾಳಿಪಟ ಜನರ ಸಿನಿಮಾ ಆಯಿತು ಎಂದು ಯೋಗರಾಜ್ ಭಟ್ ಹೇಳಿದರು.
ಟೆನ್ಶನ್ ಜೊತೆಗೆ ಭಯ ಇದೆ: ಗಾಳಿಪಟ -2 ಸಿನಿಮಾದ ಕಥೆಯೂ ಇಂಟ್ರಸ್ಟಿಂಗ್ ಆಗಿದೆ. ಗಾಳಿಪಟ -1 ಸಿನಿಮಾ ಆಗಿ ಮೂರು ವರ್ಷದಲ್ಲಿ ಈ ಸಿನಿಮಾ ಕಥೆ ಮಾಡಲು ಯೋಚಿಸಿದ್ದೆ. ಆದರೆ, ಆಗ ಕಥೆ ಶುರುವಾಗಲಿಲ್ಲ. ಕೊನೆಗೆ ಗಾಳಿಪಟ -2 ಚಿತ್ರದ ಕಥೆ ಶುರುವಾಗಿದ್ದು ಮುಗುಳು ನಗೆ ಸಿನಿಮಾ ಟೈಮಲ್ಲಿ. ಈ ಸಿನಿಮಾ ತುಂಬಾ ಕೆಲಸ ಮಾಡಿಸಿಕೊಳ್ತು. ಅಷ್ಟು ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿರೋ ಗಾಳಿಪಟ -1 ಸಿನಿಮಾದಿಂದ ಈ ಚಿತ್ರದ ಮೇಲೂ ಸಾಕಷ್ಟು ನಿರೀಕ್ಷೆ ಇದೆ. ಬಿಡುಗಡೆ ಟೆನ್ಶನ್ ಜೊತೆಗೆ ಸಿನಿಮಾ ಬಗ್ಗೆ ಸ್ವಲ್ಪ ಭಯನೂ ಇದೆ ಎನ್ನುತ್ತಾರೆ ಅವರು.