ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದ ಹಿನ್ನೆಲೆ ಬಾಲಿವುಡ್ ಚಿತ್ರರಂಗದ ನಿರ್ದೇಶಕ ರೋಹಿತ್ ಶೆಟ್ಟಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿದ್ದ ನಿರ್ದೇಶಕರನ್ನು ಹೈದರಾಬಾದ್‌ನ ಕಾಮಿನೇನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅವರು ತಮ್ಮ ಮೊದಲ ವೆಬ್ ಸರಣಿ 'ಇಂಡಿಯನ್ ಪೊಲಿಸ್ ಫೋರ್ಸ್'ಗಾಗಿ ಚಿತ್ರೀಕರಣ ನಡೆಸುತ್ತಿದ್ದರು.
ಗಾಯಗೊಂಡ ರೋಹಿತ್ ಶೆಟ್ಟಿ: ನಿರ್ದೇಶಕ ರೋಹಿತ್ ಶೆಟ್ಟಿ ಇತ್ತೀಚೆಗೆ ಹೈದರಾಬಾದ್‌ನಲ್ಲಿ ತಮ್ಮ ಚೊಚ್ಚಲ ಸರಣಿ 'ಇಂಡಿಯನ್ ಪೊಲೀಸ್ ಫೋರ್ಸ್' ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಕಾರ್ ಚೇಸ್ ದೃಶ್ಯದಲ್ಲಿ ರೋಹಿತ್ ಶೆಟ್ಟಿ ಗಾಯಗೊಂಡಿದ್ದಾರೆ. ಅಪಘಾತದ ನಂತರ, ರೋಹಿತ್ ಅವರನ್ನು ಕಾಮಿನೇನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರ ಕೈಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು ಎನ್ನುವ ಮಾಹಿತಿ ಲಭ್ಯವಾಗಿದೆ.
ಕಾರ್ ಚೇಸ್ ದೃಶ್ಯದ ಶೂಟಿಂಗ್: ರೋಹಿತ್ ಶೆಟ್ಟಿ ಕಾರ್ ಚೇಸ್ ದೃಶ್ಯದ ಶೂಟಿಂಗ್ ಶೆಡ್ಯೂಲ್ ಆಯೋಜನೆಗೊಂಡಿತ್ತು. ಪವರ್ ಫುಲ್ ದೃಶ್ಯವನ್ನು ನಿರ್ಮಿಸಲು ಬೃಹತ್ ಸೆಟ್ ಅನ್ನು ಸಿದ್ಧಪಡಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಈ ಸೆಟ್‌ನಲ್ಲಿ ಹೆಚ್ಚಿನ ಸಾಹಸ ದೃಶ್ಯಗಳನ್ನು ಪ್ರದರ್ಶಿಸಬೇಕಾಗಿತ್ತು. ಆದರೆ ಆ ವೇಳೆ ಅವಘಡ ಸಂಭವಿಸಿದೆ. ರೋಹಿತ್ ಶೆಟ್ಟಿ ಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
'ಇಂಡಿಯನ್ ಪೊಲೀಸ್ ಫೋರ್ಸ್':ಗೋಲ್ಮಾಲ್ ಸರಣಿ, ಸಿಂಗಂ ಸರಣಿ, ಚೆನ್ನೈ ಎಕ್ಸ್‌ಪ್ರೆಸ್, ಸಿಂಬಾ ಮತ್ತು ಸೂರ್ಯವಂಶಿಯಂತಹ ಸಾಹಸಮಯ ಚಿತ್ರಗಳನ್ನು ನಿರ್ದೇಶಿಸಿರುವ ರೋಹಿತ್ ಶೆಟ್ಟಿ, ತಮ್ಮ ಚೊಚ್ಚಲ ವೆಬ್‌ಸರಣಿ 'ಇಂಡಿಯನ್ ಪೊಲೀಸ್ ಫೋರ್ಸ್' ಮೂಲಕ ಡಿಜಿಟಲ್ ವೇದಿಕೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಈ ಸರಣಿಯಲ್ಲಿ ಶಿಲ್ಪಾ ಶೆಟ್ಟಿ, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವಿವೇಕ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ.