ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು 'ಕೆಜಿಎಫ್' ಖ್ಯಾತಿಯ ಪ್ರಶಾಂತ್ ನೀಲ್ ಕಾಂಬೋದಲ್ಲಿ ಮೂಡಿ ಬಂದಿರುವ ಸಿನಿಮಾ 'ಸಲಾರ್'. ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಭಾರಿ ಬಂಡವಾಳ ಹೂಡಿ ಚಿತ್ರವನ್ನು ನಿರ್ಮಿಸಿದೆ. ಇದೇ ಡಿಸೆಂಬರ್ 22ರಂದು 'ಸಲಾರ್' ತೆರೆ ಕಾಣಲಿದೆ. ಪ್ರಭಾಸ್ ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳು ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಸೋಮವಾರ ಚಿತ್ರತಂಡ ಅನಾವರಣಗೊಳಿಸಿರುವ ಎರಡನೇ ಟ್ರೇಲರ್ನಿಂದ ಚಿತ್ರದ ಮೇಲಿನ ನಿರೀಕ್ಷೆಗಳು ಮತ್ತಷ್ಟು ಹೆಚ್ಚಿವೆ.
ಆದರೆ, ಈ ಸಿನಿಮಾಗೂ 'ಕೆಜಿಎಫ್'ಗೂ ಸಂಬಂಧವಿದೆ ಎಂಬ ಹಲವು ವರದಿಗಳಿವೆ. ಜುಲೈನಲ್ಲಿ ಬಿಡುಗಡೆಯಾದ 'ಸಲಾರ್' ಟೀಸರ್ನಲ್ಲಿ ಕೆಲ ದೃಶ್ಯಗಳನ್ನು ನೋಡಿದ ಅಭಿಮಾನಿಗಳು ಹಾಗೆ ಅಂದುಕೊಂಡಿದ್ದಾರೆ. ಕೆಜಿಎಫ್ 2 ಕ್ಲೈಮ್ಯಾಕ್ಸ್ನಲ್ಲಿ ಯಶ್ ಮೇಲೆ ಅಟ್ಯಾಕ್ ಆಗುವ ಸೀನ್ ಹಾಗೂ 'ಸಲಾರ್' ಟೀಸರ್ನಲ್ಲಿ ತೋರಿಸಲಾಗಿರುವ ದೃಶ್ಯಗಳು ಒಂದೇ ಎನ್ನುತ್ತಾರೆ ಅಭಿಮಾನಿಗಳು. ಆದರೆ, ಸಿನಿಮಾ ಪ್ರಚಾರದ ಭಾಗವಾಗಿ ನಿರ್ದೇಶಕ ಪ್ರಶಾಂತ್ ನೀಲ್ ಈ ಎಲ್ಲದಕ್ಕೂ ಪ್ರತಿಕ್ರಿಯಿಸಿದ್ದಾರೆ. 'ಕೆಜಿಎಫ್'ಗೂ 'ಸಲಾರ್'ಗೂ ಯಾವುದೇ ಸಂಬಂಧವಿಲ್ಲ ಎಂದು ಮೊದಲೇ ಹೇಳಬೇಕಿತ್ತು. ಅದು ನನ್ನ ತಪ್ಪು' ಎಂದು ಪ್ರಶಾಂತ್ ನೀಲ್ ಸ್ಪಷ್ಟಪಡಿಸಿದ್ದಾರೆ.
'ಸಲಾರ್' ಅಡ್ವಾನ್ಸ್ ಬುಕ್ಕಿಂಗ್: ಭಾರಿ ನಿರೀಕ್ಷೆಗಳನ್ನು ಮೂಡಿಸಿರುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ದಾಖಲೆ ಬರೆಯುತ್ತಿದೆ. 'ಸಲಾರ್' ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ನಲ್ಲಿ 21 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ. ಜೊತೆಗೆ 'ಕೆಜಿಎಫ್' ದಾಖಲೆಯನ್ನು 'ಸಲಾರ್' ಮುರಿಯಲು ಮುಂದಾಗಿದೆ.