'ರಾಜು ಜೇಮ್ಸ್ ಬಾಂಡ್' ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದಿರುವ ಚಿತ್ರ. 'ಕನ್ನಡ ಮೀಡಿಯಂ ರಾಜು' ಚಿತ್ರದ ಬಳಿಕ ಗುರುನಂದನ್ ಅಭಿನಯಿಸುತ್ತಿರುವ ಸಿನಿಮಾ ಇದು. ಸದ್ಯ ಈ ಚಿತ್ರದ ಬೇಕಿತ್ತಾ ಬೇಕಿತ್ತಾ ಎಂಬ ಹಾಡು ಸಖತ್ ಕ್ರೇಜ್ ಹುಟ್ಟಿಸಿದೆ. ಈ ಹಾಡು ಕೇಳಿದ ನಿರ್ದೇಶಕ ಗುರುಪ್ರಸಾದ್ ಅವರು ಖುದ್ದು ಈ ಹಾಡಿನ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ. ಈ ಹಾಡು ತಮ್ಮ ಬದುಕಿಗೆ ಹತ್ತಿರವಾಗಿದೆ ಎಂದು ಹೇಳುತ್ತಾ ತಮ್ಮ ಬದುಕಿನ ಮೊದಲ ಮದುವೆ ಡಿವೋರ್ಸ್, ಎರಡನೇ ಮದುವೆ, ಮಗು ಬಗ್ಗೆ ಮಾತನಾಡಿದ್ದಾರೆ.
ಎಲ್ಲಾ ಕಡೆಗೂ ಅಪ್ಲೈ ಆಗುವಂತಹ ವಿಶೇಷ ಹಾಡೊಂದು ಬಂದಿದೆ. ಈ 'ಬೇಕಿತ್ತಾ ಬೇಕಿತ್ತಾ' ಎಲ್ಲಾ ಸಂದರ್ಭಕ್ಕೂ ಅನ್ವಯ ಆಗುತ್ತದೆ ಎಂದು ಹೇಳಿದ ಅವರು ಕೆಲ ಉದಾಹರಣೆಗಳನ್ನೂ ಕೊಟ್ಟಿದ್ದಾರೆ. ತುಂಬಾ ಇಷ್ಟ ಪಟ್ಟ ಹುಡುಗಿ ಕೈಕೊಟ್ಟು ಹೋದ್ರೆ ('ಬೇಕಿತ್ತಾ ಬೇಕಿತ್ತಾ'), ಕೈ ತುಂಬ ಸಂಬಳ ತರೋ ಮನ ಮಗ ಮನೆ ಬಿಟ್ಟು ಹೋದ್ರೆ ('ಬೇಕಿತ್ತಾ ಬೇಕಿತ್ತಾ'), ಸರ್ಕಾರಗಳು ಧಿಡೀರ್ ಬದಲಾದ್ರೆ ('ಬೇಕಿತ್ತಾ ಬೇಕಿತ್ತಾ'), ಗ್ಯಾರೆಂಟಿಗಳು ಕೈ ಕೊಟ್ಟರೆ ('ಬೇಕಿತ್ತಾ ಬೇಕಿತ್ತಾ'), ಈ ಸಲ ಕಪ್ ನಮ್ದೆ ಈ ಸಲ ಕಪ್ ನಮ್ದೇ ಎಂದು ಸೋತು ಮನೆಗೆ ಹೋದಾಗ ಕೊಹ್ಲಿ ಸಾಹೇಬ್ರ ಪತ್ನಿ ಅನುಷ್ಕಾ ಕೇಳೋ ಪ್ರಶ್ನೆ ('ಬೇಕಿತ್ತಾ ಬೇಕಿತ್ತಾ'), ಆರ್ಸಿಬಿ ಮೇಲೆ ಬೆಟ್ ಮಾಡಿ ಸೋತವರ ಪತ್ನಿಯರು ಏನು ಕೇಳ್ತಾರೆ ('ಬೇಕಿತ್ತಾ ಬೇಕಿತ್ತಾ') ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇದು ನನ್ನ ಜೀವನಕ್ಕೇ ಅಪ್ಲೈ ಮಾಡಿದಂತಿದೆ. ಮೊದಲ ಪ್ರೇಮ ವಿಫಲ ಆಯ್ತು. ಡಿವೋರ್ಸ್ ಕೂಡ ಆಯ್ತು ('ಬೇಕಿತ್ತಾ ಬೇಕಿತ್ತಾ'). ಇಷ್ಟೆಲ್ಲಾ ಆದ್ಮೇಲೆ ಇನ್ನೊಂದು ಮದುವೆ ಆದೆ, 2 ವರ್ಷದ ಮಗು ಕೂಡ ಇದೆ ('ಬೇಕಿತ್ತಾ ಬೇಕಿತ್ತಾ') ಎಂದು ಹೇಳಿದ್ದಾರೆ.