ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಚಿತ್ರಗಳ ಮಧ್ಯೆ ಮಕ್ಕಳ ಸಿನಿಮಾಗಳು ಸಿನಿ ಪ್ರಿಯರನ್ನು ರಂಜಿಸುತ್ತಿವೆ. ಇದೀಗ ಸುರೇಶ್ ಲಕ್ಕೂರ್ ನಿರ್ದೇಶನದ 'ದೇವರ ಕನಸು' ಚಿತ್ರ, ಬಿಡುಗಡೆಗೂ ಮುನ್ನವೇ ಪ್ರತಿಷ್ಠಿತ ಕಾನ್ಸ್ ಸೇರಿದಂತೆ ಮೂವತ್ತಕ್ಕೂ ಅಧಿಕ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಹೀಗೆ ಹಲವು ವಿಶೇಷತೆಯಿಂದ ಕೂಡಿರುವ 'ದೇವರ ಕನಸು' ಚಿತ್ರಕ್ಕೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಸಾಥ್ ಸಿಕ್ಕಿದೆ.
ಈ ಚಿತ್ರದ ಟ್ರೇಲರ್ ಅನ್ನು ರಿಲೀಸ್ ಮಾಡಿ ಮೆಚ್ಚಿಕೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದೇ ವೇಳೆ, ಸಿನಿಮಾದ ಮೂರು ಹಾಡುಗಳನ್ನು ಪ್ರದರ್ಶಿಸಲಾಯಿತು. ಪಿ.ಆರ್.ಕೆ ಸಂಸ್ಥೆ ಮೂಲಕ ಹಾಡುಗಳು ಬಿಡುಗಡೆಯಾಗಿದೆ. ಸಾಮಾಜಿಕ ಸಂದೇಶ ಸಾರುವ ಈ ಸಿನಿಮಾದಲ್ಲಿ 12 ವರ್ಷದ ಬಾಲಕನ ಸೈಕಲ್ ಪಡೆದುಕೊಳ್ಳುವ ಕನಸಿನ ಸುತ್ತ ನಿರ್ದೇಶಕರು ಕಥೆ ಹೆಣೆದಿದ್ದಾರೆ.
ಈ ಬಗ್ಗೆ ಮಾತನಾಡಿದ ನಿರ್ದೇಶಕ ಸುರೇಶ್ ಲಕ್ಕೂರ್, "ನಾನು ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ಅಧ್ಯಯನ ಮಾಡಿದ್ದೇನೆ. 'ದೇವರ ಕನಸು' ನನ್ನ ನಿರ್ದೇಶನದ ಮೊದಲ ಚಿತ್ರ. ಈ ಮಕ್ಕಳ ಚಿತ್ರ ಈಗಾಗಲೇ ಪ್ರತಿಷ್ಠಿತ ಕಾನ್ಸ್ ಫಿಲಂ ಫೆಸ್ಟಿವಲ್ ಸೇರಿದಂತೆ ಅನೇಕ ಫಿಲಂ ಫೆಸ್ಟಿವಲ್ ಗಳಲ್ಲಿ ಪ್ರದರ್ಶನವಾಗಿ ಪ್ರಶಂಸೆ ಪಡೆದುಕೊಂಡಿದೆ. 'ದೇವ' ಎನ್ನುವುದು ಈ ಚಿತ್ರದ ಮುಖ್ಯ ಪಾತ್ರಧಾರಿಯ ಹೆಸರು. ಈ ಪಾತ್ರದಲ್ಲಿ ಮಾಸ್ಟರ್ ದೀಪಕ್ ಅಭಿನಯಿಸಿದ್ದಾರೆ. ಈ ಹುಡುಗ ಕಾಣುವ ಕನಸು ಈಡೇರುವುದೊ ಅಥವಾ ಇಲ್ಲವೋ? ಎಂಬುದು ಕಥಾಹಂದರ" ಎಂದರು.
ಚಿತ್ರಕಥೆ ಹೀಗಿದೆ.. ಸ್ವಂತ ಸೈಕಲ್ ಖರೀದಿಸಿ ಗ್ರಾಮದಲ್ಲಿ ನಡೆದ ಸೈಕಲ್ ರೇಸ್ನಲ್ಲಿ ಗೆಲುವು ಸಾಧಿಸುವುದು ಆತನ ಮುಖ್ಯ ಉದ್ದೇಶ. ಅದನ್ನು ಈಡೇರಿಸಿಕೊಳ್ಳಲು ಬಾಲಕ ಏನೆಲ್ಲಾ ಹರಸಾಹಸ ಮಾಡುತ್ತಾನೆ ಎಂಬುದೇ ದೇವರ ಕನಸು ಚಿತ್ರದ ಎಳೆಯಾಗಿದೆ. 2019ರಲ್ಲಿಯೇ ಶೂಟಿಂಗ್ ಆರಂಭಿಸಿದ್ದ ಈ ಸಿನಿಮಾ, ಒಟ್ಟು 29 ದಿನಗಳಲ್ಲಿ ಸಂಪೂರ್ಣ ಶೂಟಿಂಗ್ ಮುಗಿಸಿಕೊಂಡಿತ್ತು. ಬಳಿಕ 2021 ರಲ್ಲಿ ಪ್ರತಿಷ್ಠಿತ ಕಾನ್ ಸಿನಿಮೋತ್ಸವಕ್ಕೆ ಆಯ್ಕೆಯಾಗಿ ಪ್ರದರ್ಶನ ಕಂಡಿತ್ತು.