ಸಾಕಷ್ಟು ಹೊಸ ಪ್ರಯೋಗಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿಯಾಗಿದೆ. ಇದೀಗ 'ದೇವರ ಆಟ ಬಲ್ಲವರಾರು' ಚಿತ್ರತಂಡ ಅಂತಹ ಮತ್ತೊಂದು ವಿನೂತನ ಕಾರ್ಯಕ್ಕೆ ಮುಂದಾಗಿದೆ. ಈ ಹಿಂದೆ ನಟ ಸಂಚಾರಿ ವಿಜಯ್ ಅವರ 'ಫಿರಂಗಿ ಪುರ' ಚಿತ್ರವನ್ನು ಕೈಗೆತ್ತಿಕೊಂಡಿದ್ದ ಜನಾರ್ಧನ್ ಪಿ. ಜಾನಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 30 ದಿನಗಳಲ್ಲಿ ಚಿತ್ರದ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಬಿಡುಗಡೆ ಮಾಡಿ ಗಿನ್ನೆಸ್ ರೆಕಾರ್ಡ್ ಮಾಡಲು ತಯಾರಿ ನಡೆಸುತ್ತಿದ್ದಾರೆ.
ಈ ಹಿಂದೆ ಗಿನ್ನೆಸ್ ದಾಖಲೆ ವಿಚಾರವಾಗಿ ನಿರ್ದೇಶಕ ಜನಾರ್ಧನ್ ಮಾತನಾಡಿದ್ದರು. "ಚಿತ್ರದ ಎಲ್ಲ ಕೆಲಸಗಳನ್ನು ಒಂದು ತಿಂಗಳೊಳಗೆ ಮುಗಿಸಿ, ಸರಿಯಾಗಿ ಒಂದು ತಿಂಗಳಿಗೆ ಚಿತ್ರವನ್ನು ತೆರೆಗೆ ತರಬೇಕು. ನಮ್ಮ ಚಿತ್ರ ಗಿನ್ನೆಸ್ ರೆಕಾರ್ಡ್ ಆಗಬೇಕು ಎಂಬುದು ನನ್ನ ಆಸೆ. ಈ ಕುರಿತು ನಾನು, ನನ್ನ ತಂಡ ಸುಮಾರು ಆರು ತಿಂಗಳಿನಿಂದ ಶ್ರಮ ಪಡುತ್ತಿದ್ದೇವೆ. ಇಡೀ ಚಿತ್ರದ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯಲಿದೆ. ವಿಶಾಲವಾದ ಜಾಗದಲ್ಲಿ ಸೆಟ್ಗಳನ್ನು ನಿರ್ಮಿಸಿ ಅದೇ ಸ್ಥಳದಲ್ಲಿ ಚಿತ್ರೀಕರಣ ಮಾಡಲಿದ್ದೇವೆ" ಎಂದಿದ್ದರು.
ಅಲ್ಲದೇ, "ದಿನಕ್ಕೆ ಸುಮಾರು 160ಕ್ಕೂ ಹೆಚ್ಚು ಜನರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಜೂನ್ 16ರಿಂದ ಐದು ದಿನಗಳ ಕಾಲ ಚಿತ್ರೀಕರಣ ನಡೆಯುವ ಸ್ಥಳದಲ್ಲಿಯೇ ತಾಲೀಮು ನಡೆಸಲಿದ್ದೇವೆ. ಆನಂತರ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ. ಹದಿನಾರು ದಿನದೊಳಗೆ ಚಿತ್ರೀಕರಣ ಮುಕ್ತಾಯವಾಗಲಿದೆ. ಚಿತ್ರೀಕರಣವಾದ ನಂತರ ಎಲ್ಲ ಕಾರ್ಯಗಳನ್ನು ಪೂರೈಸಿ ಜುಲೈ 20ರಂದು ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ನಮ್ಮ ಕಾರ್ಯವೈಖರಿ ವೀಕ್ಷಿಸಲು ಆರು ಜನ ತೀರ್ಪುಗಾರರು ಆ ಸ್ಥಳದಲ್ಲೇ ಇರುತ್ತಾರೆ" ಎಂದು ತಿಳಿಸಿದ್ದರು.
ಇದನ್ನೂ ಓದಿ:'ನಿಲ್ಲಲೇ ಬೇಕು ಎಲ್ಲ ಧಿಮಾಕು'..ಮಲಯಾಳಂ ಜೊತೆ ಕನ್ನಡದಲ್ಲೂ 'ಧೂಮಂ' ರಿಲೀಸ್