ಮಾರ್ಚ್ 12 ರಂದು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಬಾರಿಯ ಆಸ್ಕರ್ ಭಾರತಕ್ಕೆ ವಿಶೇಷವಾಗಿದೆ. ಹೌದು, ಸೌತ್ ಸೂಪರ್ ಹಿಟ್ ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡು ಅಕಾಡೆಮಿಯ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಈ ಹಿನ್ನೆಲೆ, ಆಸ್ಕರ್ ಪ್ರಶಸ್ತಿ ಮೇಲೆ ಭಾರತದ ಕಣ್ಣು ನೆಟ್ಟಿದೆ. ಅಷ್ಟೇ ಅಲ್ಲ, ವಿಶ್ವದ 9ನೇ ಸುಂದರಿ ಖ್ಯಾತಿಯ ಬಾಲಿವುಡ್ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಆಸ್ಕರ್ 2023 ಸಮಾರಂಭದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಭಾರತದ ಮತ್ತೊಂದು ಹೆಮ್ಮೆಯ ಸಂಗತಿ.
ನಟಿ ದೀಪಿಕಾ ಪಡುಕೋಣೆ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಆಸ್ಕರ್ 2023ರ ಪ್ರೆಸೆಂಟರ್ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ನಟಿ ದೀಪಿಕಾ ಪಡುಕೋಣೆ ಅವರ ಹೆಸರಿದೆ. ಆಸ್ಕರ್ ಪ್ರಶಸ್ತಿ ಹಸ್ತಾಂತರ ಮಾಡುವವರ ಪೈಕಿ ಒಬ್ಬರಾಗಿ ಆಯ್ಕೆಯಾಗಿದ್ದು, ಬಾಲಿವುಡ್, ಭಾರತೀಯ ಚಿತ್ರರಂಗ ಸೇರಿದಂತೆ ಅಭಿಮಾನಿಗಳಿಗೆ ಇದು ಖುಷಿಯ ಸಂಗತಿ.
ತಮ್ಮ ಪ್ರೀತಿ ವ್ಯಕ್ತಪಡಿಸುವುದರಲ್ಲಿ ಎಂದಿಗೂ ಹಿಂದೆ ಸರಿಯದ ನಟಿಯ ಪತಿ, ನಟ ರಣ್ವೀರ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ದೀಪಿಕಾ ಅವರು ಆಸ್ಕರ್‌ಗೆ ಪ್ರೆಸೆಂಟರ್ ಆಗಿ ಆಯ್ಕೆ ಆದ ಮೇಲೆ, ಆಶೀರ್ವಾದ ಪಡೆದ ಇಮೋಜಿ ಮತ್ತು ಮೂರು ಕ್ಲಾಪ್ ಇಮೋಜಿಗಳನ್ನು ಕಾಮೆಂಟ್ ಮಾಡುವ ಮೂಲಕ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ದೀಪಿಕಾ ಪಡುಕೋಣೆ ಅವರ ಸಹೋದರಿ ಅನಿಶಾ ಪಡುಕೋಣೆ ಕೂಡ ಕಾಮೆಂಟ್ ವಿಭಾಗದಲ್ಲಿ ಫೈರ್ ಎಮೋಜಿಯೊಂದಿಗೆ 'ಬೂಮ್' ಎಂದು ಬರೆದಿದ್ದಾರೆ.
ನಟಿಯ ಸಾಧನೆಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಪಠಾಣ್ ಚಿತ್ರದ ಯಶಸ್ಸು, ಆಸ್ಕರ್ ವೇದಿಕೆ ಮೇಲೇರಲು ಆಯ್ಕೆ ಆಗಿದ್ದರ ಬಗ್ಗೆ ಮೆಚ್ಚುಗೆ ಸೂಚಿಸಿ ಶುಭ ಕೋರುತ್ತಿದ್ದಾರೆ. "ಇದನ್ನು ನಾವು ಜಾಗತಿಕ ಪ್ರಾಬಲ್ಯ ಎಂದು ಕರೆಯುತ್ತೇವೆ" ಎಂದು ಬಳಕೆದಾರರು ತಿಳಿಸಿದ್ದಾರೆ. "ಕ್ವೀನ್" ಎಂದು ನಟಿಯ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಅಭಿಮಾನಿ ಭಾವಪರವಶರಾಗಿ ಕಾಮೆಂಟ್ ಮಾಡಿದ್ದು, ದೀಪಿಕಾ ಅವರು ಮೌನವಾಗಿ ತಮ್ಮ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ನನಗೆ ಅವರ ಬಗ್ಗೆ ಬಹಳ ಹೆಮ್ಮೆ ಇದೆ, ದೀಪಿಕಾ ಪಡುಕೋಣೆ ಹೋಗುವ ದಾರಿ ಇನ್ನೂ ಇದೆ, ಇದು ಕೇವಲ ಆರಂಭ ಎಂದು ತಿಳಿಸಿದ್ದಾರೆ.
ನಟಿ ಶೀಘ್ರದಲ್ಲೇ ಮೈಕೆಲ್ ಬಿ. ಜೋರ್ಡಾನ್, ಎಮಿಲಿ ಬ್ಲಂಟ್, ಡ್ವೇನ್ ಜಾನ್ಸನ್, ರಿಜ್ ಅಹ್ಮದ್, ಗ್ಲೆನ್ ಕ್ಲೋಸ್, ಜೆನ್ನಿಫರ್ ಕೊನ್ನೆಲಿ, ಮೆಲಿಸ್ಸಾ ಮೆಕಾರ್ಥಿ, ಟ್ರಾಯ್ ಕೋಟ್ಸುರ್, ಸ್ಯಾಮ್ಯುಯೆಲ್ ಎಲ್. ಜಾಕ್ಸನ್, ಜೋ ಸಲ್ಡಾನಾ, ಜೊನಾಥನ್ ಮೇಜರ್ಸ್, ಡೋನಿ ಯೆನ್ ಮತ್ತು ಕ್ವೆಸ್ಟ್ಲವ್ ಅವರ ತಂಡಕ್ಕೆ ಸೇರಲಿದ್ದಾರೆ.
ಇದನ್ನೂ ಓದಿ:ಶಾರುಖ್ ಖಾನ್ ಐಷಾರಾಮಿ 'ಮನ್ನತ್' ಬಂಗಲೆಗೆ ನುಗ್ಗಿದ ಇಬ್ಬರು ಪೊಲೀಸ್ ವಶಕ್ಕೆ
ಭಾರತೀಯ ಮನೋರಂಕನಾ ಕ್ಷೇತ್ರಕ್ಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಕೊಡುಗೆ ಅಪಾರ. ಜಾಗತಿಕ ಮಟ್ಟದಲ್ಲಿ ಈ ಬಹುಬೇಡಿಕೆ ತಾರೆ ದೇಶವನ್ನು ಹಲವು ಬಾರಿ ಪ್ರತಿನಿಧಿಸಿದ್ದಾರೆ. ಈ ಹಿಂದೆಯೂ ಅಂತಾರಾಷ್ಟ್ರೀಯ ಮಟ್ಟದ ಗೌರವಕ್ಕೆ ಪಾತ್ರರಾಗಿದ್ದರು ದೀಪಿಕಾ ಪಡುಕೋಣೆ. ಫಿಫಾ 2022 ಕ್ರೀಡಾಕೂಟದ ಫೈನಲ್ ಪಂದ್ಯಕ್ಕೂ ಮೊದಲು ಲುಸೈಲ್ ಐಕಾನಿಕ್ ಸ್ಟೇಡಿಯಂನಲ್ಲಿ ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ್ದರು.