ಬಾಲಿವುಡ್‌ನ ಸ್ಟಾರ್ ದಂಪತಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ. ಇವರಿಬ್ಬರು ಪರಸ್ಪರ ಎಲ್ಲಾ ವಿಷಯದಲ್ಲೂ ಪ್ರೋತ್ಸಾಹ ನೀಡುತ್ತ ಪರ್ಫೆಕ್ಟ್ ಕಪಲ್ ಎನಿಸಿಕೊಂಡಿದ್ದಾರೆ. ಜುಲೈ 6 ರಂದು ರಣವೀರ್ ಹುಟ್ಟುಹಬ್ಬವಿತ್ತು. ಇತ್ತೀಚೆಗೆ ಅಲಿಬಾಗ್‌ನಲ್ಲಿ ರಣವೀರ್ ತಮ್ಮ ಹುಟ್ಟುಹಬ್ಬವನ್ನು ಪತ್ನಿಯೊಂದಿಗೆ ಸೇರಿ ಆಚರಿಸಿದ್ದಾರೆ. ಬೀಚ್ ಟೌನ್‌ನಲ್ಲಿ ನಟನ ವಿಶೇಷ ದಿನವನ್ನು ಆಚರಿಸಿದ ನಂತರ ದಂಪತಿ ಮುಂಬೈಗೆ ಹಿಂತಿರುಗಿದ್ದಾರೆ. ಇಬ್ಬರು ಕೈ ಕೈ ಹಿಡಿದುಕೊಂಡ ಲುಕ್ನಲ್ಲಿ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ.
ರಣವೀರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದ ಮೂಲಕ ಶುಭಾಶಯ ಕೋರಿದ್ದರು. ಆದರೆ ದೀಪಿಕಾ ಮಾತ್ರ ತಮ್ಮ ಪತಿಗೆ ಈ ರೀತಿಯಲ್ಲಿ ವಿಶ್ ಮಾಡಿರಲಿಲ್ಲ. ಇದು ಸ್ಟಾರ್ ದಂಪತಿಯ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಗಾಸಿಪ್ಗಳಿಗೆ ಕಾರಣವಾಗಿತ್ತು. ಆದರೆ ಭಾನುವಾರ ರಾತ್ರಿ ಈ ಜೋಡಿ ಜೊತೆಯಾಗಿ ಬರ್ತ್ಡೇ ಆಚರಿಸಿದ್ದನ್ನು ಕಂಡು, ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಪಾಪರಾಜಿಗಳು ಹಂಚಿಕೊಂಡಿರುವ ವಿಡಿಯೋದಲ್ಲಿ ರಣವೀರ್ ತಮ್ಮ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತು ಹಿಂದೆ ಕುಳಿತಿದ್ದ ದೀಪಿಕಾ ಜೊತೆ ಮಾತನಾಡುತ್ತಿರುವುದನ್ನು ಕಾಣಬಹುದು. ದೀಪಿಕಾ ಬಿಳಿ ಮ್ಯಾಕ್ಸಿ ಉಡುಗೆ ಮತ್ತು ಕಪ್ಪು ಸನ್ಗ್ಲಾಸ್ ಧರಿಸಿದ್ದರು. ಕೂದಲನ್ನು ಅಚ್ಚುಕಟ್ಟಾಗಿ ಪೋನಿ ಕಟ್ಟಿದ್ದರು. ಮತ್ತೊಂದೆಡೆ ರಣವೀರ್ ಕ್ಯಾಶುವಲ್ ದಿರಿಸಿನಲ್ಲಿ ಕಾಣಿಸಿಕೊಂಡರು. ಬಿಳಿ ಟಿ-ಶರ್ಟ್, ಡೆನಿಮ್, ಬ್ಲ್ಯಾಕ್ ಸನ್ಗ್ಲಾಸ್ ಮತ್ತು ಕಪ್ಪು ಕ್ಯಾಪ್ ಧರಿಸಿದ್ದರು.