ಬಾಲಿವುಡ್ 'ಪದ್ಮಾವತಿ' ದೀಪಿಕಾ ಪಡುಕೋಣೆ ಇಂದು ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. 37ನೇ ವಸಂತಕ್ಕೆ ಕಾಲಿಟ್ಟಿರುವ ನಟಿಗೆ ಅಭಿಮಾನಿಗಳು, ಆತ್ಮೀಯರು, ಚಿತ್ರರಂಗದವರು ಶುಭ ಕೋರುತ್ತಿದ್ದಾರೆ. ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಕೆ ಇವರದ್ದು. ದೀಪಿಕಾ ನಟನಾ ಶೈಲಿ ಮತ್ತು ಫ್ಯಾಷನ್ಗಳಿಗೆ ಅವರ ಅಭಿಮಾನಿಗಳು ಮನಸೋತಿದ್ದಾರೆ.
ದೀಪಿಕಾ ಸಿನಿ ಪಯಣ ಹೀಗಿದೆ..: ಪಡುಕೋಣೆ ಮೂಲತಃ ಕರ್ನಾಟಕ ಮೂಲದವರು. ಕಾಲೇಜಿನಲ್ಲಿದ್ದಾಗಲೇ ಮಾಡೆಲಿಂಗ್ ವೃತ್ತಿ ಆಯ್ದುಕೊಂಡಿದ್ದರು. ಭಾರತದ ಹಲವಾರು ಬ್ರಾಂಡ್ಗಳಿಗೆ ಮಾಡೆಲ್ ಆಗಿದ್ದವರು. ಮಾಡೆಲಿಂಗ್ ಕ್ಷೇತ್ರದಲ್ಲಿ ಯಶಸ್ಸು ಗಳಿಸಿದ ಬಳಿಕ ನಟನೆಯತ್ತ ಮುಖ ಮಾಡಿದ್ದರು. 2006ರಲ್ಲಿ ಉಪೇಂದ್ರ ಜೊತೆ 'ಐಶ್ವರ್ಯಾ' ಎಂಬ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಮುಂದೆ ಅವರ ಪಯಣ ಬಾಲಿವುಡ್ ಕಡೆಗೆ. 2007ರಲ್ಲಿ ಶಾರುಖ್ ಖಾನ್ ಅಭಿನಯದ ಓಂ ಶಾಂತಿ ಓಂ ಚಿತ್ರದಲ್ಲಿ ನಾಯಕಿಯಾಗಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಈ ಸಿನಿಮಾ ಅಪಾರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಇದೇ ಚಿತ್ರಕ್ಕೆ ದೀಪಿಕಾ 4ಕ್ಕಿಂತಲೂ ಹೆಚ್ಚು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
'ದೀಪ್ವೀರ್' ಜೋಡಿ: ನವೆಂಬರ್ 14, 2018 ರಂದು ಇಟಲಿಯ ಐಷಾರಾಮಿ ಹೋಟೆಲ್ನಲ್ಲಿ ಹಸೆಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ದೀಪಿಕಾ ಮತ್ತು ರಣವೀರ್ ಸಿಂಗ್ ಕಾಲಿಟ್ಟರು. 2012ರಲ್ಲಿ ತೆರೆಕಂಡ 'ಗೋಲಿಯೋನ್ ಕಿ ರಾಸ್ಲೀಲಾ-ರಾಮ್ಲೀಲಾ ಚಿತ್ರದಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿತ್ತಂತೆ. ಇದೇ ಪ್ರೀತಿ ಮುಂದೊಂದು ದಿನ ಅವರ ಮದುವೆಗೂ ತಳಪಾಯ ಹಾಕಿದೆ. ರಾಮಲೀಲಾ', 'ಬಾಜಿರಾವ್ ಮಸ್ತಾನಿ' ನಂತರ ತಾರಾ ಜೋಡಿ 'ಫೈಂಡಿಂಗ್ ಫ್ಯಾನಿ', 'ಪದ್ಮಾವತ್' ನಲ್ಲಿಯೂ ಕಾಣಿಸಿಕೊಂಡರು.