ಇತ್ತೀಚಿನ ದಿನಗಳಲ್ಲಿ ಸಿನಿಮಾಗಳನ್ನು ಥಿಯೇಟರ್ಗಳಲ್ಲಿ ಬಂದು ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಇಂತಹ ಹೊತ್ತಿನಲ್ಲಿ ಕನ್ನಡ ಸಿನಿಮಾವೊಂದು ಯಶಸ್ವಿಯಾಗಿ 50 ದಿನ ಪೂರೈಸಿದೆ. ಇದೀ ಬರೀ ಚಿತ್ರತಂಡ ಮಾತ್ರವಲ್ಲ, ಇಡೀ ಚಿತ್ರರಂಗವೇ ಖುಷಿಪಡುವ ವಿಚಾರ. ಅಂತಹ ಯಶಸ್ಸಿಗೆ ಕಾರಣವಾದದ್ದು ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ 'ಡೇರ್ ಡೆವಿಲ್ ಮುಸ್ತಫಾ' ಸಿನಿಮಾ.
ಹೌದು. ಈ ಚಿತ್ರವು ಥಿಯೇಟರ್ನಲ್ಲಿ ಬರೋಬ್ಬರಿ ಐವತ್ತು ದಿನ ಪೂರೈಸಿ, ಓಟಿಟಿ ಪ್ಲಾಟ್ಫಾರ್ಮ್ ಅಮೆಜಾನ್ ಪ್ರೈಮ್ನಲ್ಲೂ ಭರಪೂರ ಮೆಚ್ಚುಗೆ ಪಡೆಯುತ್ತಿದೆ. ಈ ಖುಷಿ ವಿಚಾರವನ್ನು ಚಿತ್ರತಂಡ ಸೆಲೆಬ್ರೇಟ್ ಮಾಡಿದೆ. ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆದ ಐವತ್ತು ದಿನದ ಸಂಭ್ರಮಾಚರಣೆಯಲ್ಲಿ ಇಡೀ ತಂಡಕ್ಕೆ ಗೆಲುವಿನ ಪಾರಿತೋಷಕ ನೀಡಿ ಗೌರವಿಸಲಾಯಿತು. ಜೊತೆಗೆ ಬಿರಿಯಾನಿ, ಪುಳಿಯೋಗರೆ ಪಾರ್ಟಿ ಮಾಡಿ ಇಡೀ ಡೇರ್ ಡೆವಿಲ್ ಮುಸ್ತಾಫಾ ತಂಡ ಖುಷಿಪಟ್ಟಿತು.
ಈ ಸಿನಿಮಾವನ್ನು ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಪ್ರೆಸೆಂಟ್ ಮಾಡಿರುವ ನಟ ಧನಂಜಯ್ ಮಾತನಾಡಿ, "ನಾನು ಡೇರ್ ಡೆವಿಲ್ ಮುಸ್ತಫಾ ಸಿನಿಮಾದ ಭಾಗವಾಗಿರುವುದು ನನಗೆ ಖುಷಿ. ಶಶಾಂಕ್ ಕಾಲೇಜ್ನಲ್ಲಿ ನನಗೆ ಜೂನಿಯರ್. ಅಲ್ಲಿಂದನೂ ನೋಡ್ತಾ ಇದ್ದೆ. ತುಂಬಾ ಜನ ನಿರ್ದೇಶಕರು ಆಗಬೇಕು ಎಂದು ಇಂಡಸ್ಟ್ರಿಗೆ ಬರುತ್ತಾರೆ. ನಾನು ಕಥೆ ಮಾಡಿದ್ದೇನೆ, ಇನ್ವೆಸ್ಟ್ ಮಾಡಿ ಅಂತಾರೇ. ನಾನು ಅವರಿಗೆ ಶಶಾಂಕ್ ಅವರನ್ನು ಉದಾಹರಣೆಯಾಗಿ ಕೊಟ್ಟು ಕಳಿಸುತ್ತೇನೆ. ಸೀದಾ ಬಂದು ಕಥೆ ಮಾಡಿದ್ದೇನೆ, ಕೋಟ್ಯಂತರ ರೂಪಾಯಿ ದುಡ್ಡು ಹಾಕಿ ಎಂದರೆ ಕಷ್ಟವಾಗುತ್ತದೆ. ಡೇರ್ ಡೆವಿಲ್ ಮುಸ್ತಫಾವನ್ನು ಮಾಸ್ ಸಿನಿಮಾ ಅಂತಾನೇ ಕರೆಯುತ್ತೇನೆ. ಥಿಯೇಟರ್ನಲ್ಲಿ ಕುಳಿತು ನೋಡಿ ಸೆಲೆಬ್ರೇಟ್ ಮಾಡುವ ಸಿನಿಮಾವಿದು. ಹಳೆ ಬೇರು ಹೊಸ ಚಿಗರು ಕೂಡಿರಲು ಮರ ಸೊಬಗು ಎನ್ನುವಂತೆ ಹಿರಿಯರು ಹಾಗೂ ಕಿರಿಯರು ಎಲ್ಲರೂ ಇಟ್ಟುಕೊಂಡು ಈ ಸಿನಿಮಾವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ" ಎಂದರು.