ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥಾಧರಿತ ಚಿತ್ರ 'ಡೇರ್ ಡೆವಿಲ್ ಮುಸ್ತಾಫಾ' ಕನ್ನಡ ಚಿತ್ರರಂಗದಲ್ಲಿ ಸೌಂಡ್ ಮಾಡುತ್ತಿದೆ. ತೇಜಸ್ವಿ ಕಥೆಗಳನ್ನು ಓದಿದ ತಂಡದವರೇ ಸೇರಿಕೊಂಡು ನಿರ್ಮಾಣ ಮಾಡಿದ ಚಿತ್ರ ಇದಾಗಿದ್ದು ಸಿನಿಮಾ ರಸಿಕರ ಮನಸ್ಸು ಸೆಳೆಯುತ್ತಿದೆ. ಈ ಹಿಂದೆ 'ಫಟಿಂಗ' ಎಂಬ ಜನಪ್ರಿಯ ಕಿರುಚಿತ್ರ ನಿರ್ದೇಶನ ಮಾಡಿದ್ದ ಶಶಾಂಕ್ ಸೋಗಾಲ್ 'ಡೇರ್ ಡೆವಿಲ್ ಮುಸ್ತಾಫಾ' ಮೂಲಕ ಇದೀಗ ಪೂರ್ಣ ಪ್ರಮಾಣವಾಗಿ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.
ಇಂದು ರಾಜ್ಯಾದ್ಯಂತ 80ಕ್ಕೂ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಂಡಿದ್ದು ನಟ, ಡಾಲಿ ಧನಂಜಯ್ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ತೇಜಸ್ವಿ ಸಾಹಿತ್ಯ ಪ್ರೇಮಿಯಾಗಿರುವ ಧನಂಜಯ್ ಈ ಚಿತ್ರವನ್ನು ಡಾಲಿ ಪಿಕ್ಚರ್ಸ್ ವತಿಯಿಂದ ಪ್ರೆಸೆಂಟ್ ಮಾಡುತ್ತಿದ್ದು, ಕೆಆರ್ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಸಿನಿಮಾ ನಿರ್ಮಾಣದಲ್ಲಿ ತೇಜಸ್ವಿ ಅವರ ದೊಡ್ಡ ಅಭಿಮಾನಿ ಬಳಗವೇ ಇರುವುದು ವಿಶೇಷ.
'ಡೇರ್ ಡೆವಿಲ್ ಮುಸ್ತಾಫಾ' ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದು ಚಿತ್ರಮಂದಿರದ ಮುಂದೆ ತೇಜಸ್ವಿಯವರ ಕಟೌಟ್ ನಿಲ್ಲಿಸಲಾಗಿದೆ. ನಟ-ನಟಿಯರ ಕಟೌಟ್ಗಳು ಮಾತ್ರ ಕಾಣಿಸಿಕೊಳ್ಳುತ್ತಿದ್ದ ಜಾಗದಲ್ಲಿ ಇದೇ ಮೊದಲ ಬಾರಿಗೆ ಸಾಹಿತಿಯೊಬ್ಬರ ಕಟೌಟ್ ರಾರಾಜಿಸುತ್ತಿರುವುದು ವಿಶೇಷವಾಗಿದೆ.