ಬೆಂಗಳೂರು:ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ 75 ಲಕ್ಷ ರೂಪಾಯಿ ಸಾಲ ಪಡೆದು ವಂಚನೆ ಮಾಡಿದ್ದಲ್ಲದೆ, ಮದುವೆಯಾಗುವುದಾಗಿ ಪುಸಲಾಯಿಸಿ ತಮ್ಮ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿ ನಿರ್ಮಾಪಕರ ವಿರುದ್ಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ ನೀಡಿದ ದೂರಿನ ಅನ್ವಯ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ದಿ ಕಲರ್ ಆಫ್ ಟೊಮೆಟೊ ಹಾಗೂ 5ಡಿ ಚಿತ್ರದ ನಿರ್ಮಾಪಕ ಕುಮಾರ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. 35 ವರ್ಷದ ಮಹಿಳೆಯು ದೂರು ನೀಡಿದ್ದು, ಕೆಲ ವರ್ಷಗಳ ಹಿಂದೆ ಮಹಿಳೆಯ ಪತಿ ನಿಧನವಾಗಿದ್ದಾರೆ. ಈಕೆಗೆ ಓರ್ವ ಮಗಳಿದ್ದಾಳೆ. 2020ರಲ್ಲಿ ನಿರ್ದೇಶಕ ಕುಮಾರ್ ಮಹಿಳೆಗೆ ಪರಿಚಿತಗೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ವಿವರ: ''ಮದುವೆಯಾಗುವುದಾಗಿ ತನ್ನನ್ನು ನಂಬಿಸಿದ್ದ ಕುಮಾರ್, ಆ ನಂತರ ಚಿತ್ರಗಳಲ್ಲಿ ನಟಿಸಲು ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದ. ಇದೇ ವೇಳೆ ದಿ ಕಲರ್ ಆಫ್ ಟೊಮೆಟೊ ಹಾಗೂ 5ಡಿ ಚಿತ್ರಗಳ ನಿರ್ಮಾಣ ಮಾಡುತ್ತಿದ್ದೇನೆ. ಹಣ ನೀಡಿದರೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುವುದಾಗಿ ಹೇಳಿ ಹಂತ-ಹಂತವಾಗಿ 75 ಲಕ್ಷ ಪಡೆದಿದ್ದಾರೆ. ಬಿಡುಗಡೆ ಬಳಿಕ ಚಿತ್ರಗಳು ಸೂಪರ್ ಹಿಟ್ ಆಗಲಿದ್ದು, ನೀಡಿದ ಸಾಲಕ್ಕೆ ದುಪ್ಪಟ್ಟು (1.5 ಕೋಟಿ ರೂಪಾಯಿ) ಹಣ ನೀಡುವುದಾಗಿ ಭರವಸೆ ನೀಡಿದ್ದರು. ಹಲವು ತಿಂಗಳಾದರೂ ಹಣ ವಾಪಸ್ ನೀಡಿರಲಿಲ್ಲ. ದುಡ್ಡು ಕೇಳಲು ಹೋದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ'' ಎಂದು ನೊಂದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.