ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ (58) ಬುಧವಾರ ನಿಧನರಾಗಿದ್ದಾರೆ. ಇಂದು ದೆಹಲಿಯ ನಿಗಮ್ ಬೋಧ್ ಘಟ್ನಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಸ್ಟ್ಯಾಂಡ್-ಅಪ್ ಕಾಮಿಡಿಯನ್(stand-up comedian) ಆಗಿರುವ ರಾಜು ಶ್ರೀವಾಸ್ತವ್ ಆಗಸ್ಟ್ 10 ರಂದು ಜಿಮ್ನಲ್ಲಿ ದೈಹಿಕ ಕಸರತ್ತು ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದರು. ತಕ್ಷಣವೇ ದೆಹಲಿ ಏಮ್ಸ್‌ಗೆ ಕರೆತರಲಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ಹೇಳಲಾಗಿತ್ತು. ಇದಕ್ಕೂ ಮುನ್ನ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಆಗಸ್ಟ್ 25ರಂದು ಅವರಿಗೆ ಪ್ರಜ್ಞೆ ಬಂದಿತ್ತು ಎಂದು ಆಸ್ಪತ್ರೆಯ ವೈದ್ಯ ಗರ್ವಿತ್ ನರಂಗ್ ಮಾಹಿತಿ ನೀಡಿದ್ದರು. ಏಮ್ಸ್ನಲ್ಲಿ ಕಳೆದ 49 ದಿನಗಳಿಂದ ಚಿಕಿತ್ಸೆ ಪಡೆದುಯುತ್ತಿದ್ದ ರಾಜು ಅವರು ಇದೀಗ ಇಹಲೋಕದ ಪಯಣ ಮುಗಿಸಿದ್ದು, ಇಂದು ಅಂತಿಮ ವಿಧಿ ವಿಧಾನಗಳನ್ನು ಮಾಡಲಾಗಿದೆ.
ಅವರ ಅಂತ್ಯಕ್ರಿಯೆಯಲ್ಲಿ ನೂರಾರು ಜನರು ಪಾಲ್ಗೊಂಡರು. ಅಗಲಿದ ಆತ್ಮದ ಪಾರ್ಥಿವ ಶರೀರವು ದೆಹಲಿಯ ದಶರಥಪುರಿ ಪ್ರದೇಶದಿಂದ ನಿಗಮ್ ಬೋಧ್ ಘಾಟ್‌ನಲ್ಲಿ ದಹನಕ್ಕಾಗಿ ಬೆಳಗ್ಗೆ 8 ಗಂಟೆಗೆ ಹೊರಟಿತು. ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಅಗಲಿದ ತಾರೆಯ ಅಂತಿಮ ದರ್ಶನವನ್ನು ಇಂದು ಪಡೆದರು. ದುಃಖ ಮನೆ ಮಾಡಿತ್ತು.
ಅಂತ್ಯಕ್ರಿಯೆಗಾಗಿ ಅವರ ಪಾರ್ಥಿವ ಶರೀರವನ್ನು ಬಿಳಿ ಹೂವುಗಳಿಂದ ಮುಚ್ಚಿದ ಆಂಬ್ಯುಲೆನ್ಸ್‌ನಲ್ಲಿ ಸ್ಮಶಾನಕ್ಕೆ ಕೊಂಡೊಯ್ಯಲಾಯಿತು. ಅವರ ಪುತ್ರ ಆಯುಷ್ಮಾನ್ ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.