ರಾಜಕೀಯ ಮುಖಂಡ ರಾಘವ್ ಚಡ್ಡಾ ಹಾಗೂ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಜೋಡಿಯ ಅದ್ಧೂರಿ ವಿವಾಹ ಸಖತ್ ಸದ್ದು ಮಾಡುತ್ತಿದೆ. ಮದುವೆಗೆ ಇನ್ನೊಂದೆ ದಿನ ಬಾಕಿ ಇದೆ. ನಾಳೆ ಮುದುವೆ ಮುನ್ನದ ಕಾರ್ಯಕ್ರಮಗಳು ನಡೆದರೆ, ನಾಡಿದ್ದು ಪ್ರೇಮಪಕ್ಷಿಗಳು ಹಸೆಮಣೆ ಏರಲಿದ್ದಾರೆ. ಈಗಾಗಲೇ ಮದುವೆ ಮುನ್ನದ ಸಂಭ್ರಮಗಳು ಶುರುವಾಗಿವೆ. ವಧು, ವರ ಬೆಳಗ್ಗೆಯೇ ರಾಜಸ್ಥಾನ ತಲುಪಿದ್ದಾರೆ. ಚೋಪ್ರಾ ಮತ್ತು ಚಡ್ಡಾ ಕುಟುಂಬಸ್ಥರು ಈಗಾಗಲೇ ಉದಯಪುರಕ್ಕೆ ಆಗಮಿಸಿದ್ದಾರೆ. ಇಬ್ಬರ ಕುಟುಂಬಸ್ಥರು ಉದಯಪುರಕ್ಕೆ ಆಗಮಿಸುತ್ತಿರುವ ಹಲವು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ನಟಿ ಪರಿಣಿತಿ ಚೋಪ್ರಾ ಪೋಷಕರಾದ ಪವನ್ ಮತ್ತು ರೀನಾ ಚೋಪ್ರಾ ದಂಪತಿ ಇಂದು ಉದಯಪುರ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ನಟಿಯ ತಾಯಿ ಬ್ಲ್ಯೂ ಕುರ್ತಾ ಧರಿಸಿ ಕಾಣಿಸಿಕೊಂಡರು. ತಂದೆ ಕಂಪ್ಲೀಟ್ ಬ್ಲ್ಯಾಕ್ ಡ್ರೆಸ್, ಸನ್ಗ್ಲಾಸ್ ಧರಿಸಿ ಕಾಣಿಸಿಕೊಂಡರು. ವಧುವಿನ ಸಹೋದರ, ಶಿವಾಂಗ್ ಚೋಪ್ರಾ ಕೂಡ ಸಂಪೂರ್ಣ ಕಪ್ಪುಡುಗೆಯಲ್ಲಿ ಆಗಮಿಸಿದ್ದರು. ವಧು ವರ ಸೇರಿದಂತೆ ಕುಟುಂಬಸ್ಥರಿಗೂ ಏರ್ಪೋರ್ಟ್ ಬಳಿ ಭರ್ಜರಿ ಸ್ವಾಗತ ಕೋರಲಾಗಿದ್ದು, ಕುಟುಂಬಸ್ಥರು ಪಾಪರಾಜಿಗಳನ್ನು ಕಂಡು ನಸುನಕ್ಕರು.
ವರನ ಕುಟುಂಬಸ್ಥರನ್ನು ಗಮನಿಸುವುದಾದರೆ, ರಾಘವ್ ಚಡ್ಡಾ ಅವರ ತಾಯಿ ಅಲ್ಕಾ ಚಡ್ಡಾ ಪ್ರಿಂಟೆಡ್ ರೆಡ್ ಸೂಟ್ನಲ್ಲಿ ಸರಳವಾಗಿ ಕಾಣಿಸಿಕೊಂಡರು. ತಂದೆ ಸುನಿಲ್ ಚಡ್ಡಾ ಅವರು ಕಪ್ಪು ಕಾರ್ಗೋ ಪ್ಯಾಂಟ್, ಬಿಳಿ ಶರ್ಟ್ ಧರಿಸಿದ್ದರು. ವಿಮಾನ ನಿಲ್ದಾಣದಲ್ಲಿ ಬಂದು ಸೇರಿದ್ದ ಪಾಪರಾಜಿಗಳನ್ನು ಕಂಡು ಚಡ್ಡಾ ಮನೆಯವರು ಮುಗುಳ್ನಕ್ಕರು.