ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಲಕ್ಷದ್ವೀಪ ಭೇಟಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಬಾಲಿವುಡ್ ಮತ್ತು ಕ್ರೀಡಾ ವಲಯಗಳ ಹಲವು ಸೆಲೆಬ್ರಿಟಿಗಳು ಚರ್ಚೆಯಲ್ಲಿ ತೊಡಗಿದ್ದಾರೆ. ಆನ್‌ಲೈನ್‌ನಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಜಾನ್ ಅಬ್ರಹಾಂ, ಶ್ರದ್ಧಾ ಕಪೂರ್ ಮತ್ತು ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಅವರಂತಹ ಖ್ಯಾತನಾಮರು ಲಕ್ಷದ್ವೀಪದ ಸೌಂದರ್ಯ ವರ್ಣಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಲಕ್ಷದ್ವೀಪಕ್ಕೆ ಭೇಟಿ ನೀಡುವ ಮೂಲಕ ಅದನ್ನು ಅತ್ಯುತ್ತಮ ಪ್ರವಾಸಿ ತಾಣವಾಗಿ ಬಿಂಬಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅಣಕವಾಡಿದ್ದಲ್ಲದೇ, ಮಾಲ್ಸಿವ್ಸ್ನ ರಾಜಕಾರಣಿಗಳು ಭಾರತೀಯರನ್ನು ನಿಂದಿಸಿದ್ದರು. ಅವರ ಹೇಳಿಕೆಗಳಿಗೆ ಆಕ್ರೋಶ ವ್ಯಕ್ತವಾಗುತ್ತಿದೆ. #BoycottMaldives ಟ್ರೆಂಡಿಂಗ್ನಲ್ಲಿದ್ದು, ಸಿನಿತಾರೆಯರೂ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಲಕ್ಷದ್ವೀಪ ಸೌಂದರ್ಯ ಗುಣಗಾನ ಮಾಡುವ ಮೂಲಕ ಪರೋಕ್ಷವಾಗಿ ಮಾಲ್ಡೀವ್ಸ್ ನಾಯಕರ ನಡೆಗೆ ತಿರುಗೇಟು ಕೊಟ್ಟಿದ್ದಾರೆ.
ಮಾಲ್ಡೀವ್ಸ್ ನಾಯಕರ ಟೀಕೆಭರಿತ ಸೋಷಿಯಲ್ ಮೀಡಿಯಾ ಪೋಸ್ಟ್ನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡ ಬಾಲಿವುಡ್ ನಟ ಅಕ್ಷಯ್ ಕುಮಾರ್, ಇದನ್ನು "ಅಪ್ರಚೋದಿತ ದ್ವೇಷ" ಎಂದು ಖಂಡಿಸಿದ್ದಾರೆ. ಭಾರತೀಯ ಪ್ರವಾಸಿಗರ ಮೇಲೆ ಹೆಚ್ಚು ಅವಲಂಬಿತವಾಗಿರುವ ರಾಷ್ಟ್ರದಿಂದ ಇಂತಹ ಕಾಮೆಂಟ್‌ಗಳು ಉತ್ತಮ ನಡೆಯಲ್ಲ ಎಂಬುದನ್ನು ಒತ್ತಿಹೇಳಿದರು.
ನಟ ಸಲ್ಮಾನ್ ಖಾನ್ ಅವರು ಲಕ್ಷದ್ವೀಪದ ಅದ್ಭುತ ಕಡಲತೀರಗಳಲ್ಲಿ ಪ್ರಧಾನಿ ಮೋದಿಯವರ ಉಪಸ್ಥಿತಿ ಬಗ್ಗೆ ಹೊಗಳಿದರು. ''ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರಭಾಯಿ ಮೋದಿಯ ಅವರನ್ನು ಲಕ್ಷದ್ವೀಪ್‌ನ ಸುಂದರ, ಸ್ವಚ್ಛ ಮತ್ತು ಬೆರಗುಗೊಳಿಸುವ ಕಡಲತೀರಗಳ ಬಳಿ ನೋಡಲು ಬಹಳ ಚೆನ್ನಾಗಿದೆ. ಉತ್ತಮ ವಿಷಯವೆಂದರೆ ಇದು ನಮ್ಮ ಭಾರತದಲ್ಲಿದೆ'' ಎಂದು ಟ್ವೀಟ್ ಮಾಡಿದ್ದಾರೆ.
ನಟ ಜಾನ್ ಅಬ್ರಹಾಂ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಅತಿಥಿ ದೇವೋ ಭವ" ಪರಿಕಲ್ಪನೆಯನ್ನು ಉಲ್ಲೇಖಿಸಿ ಭೇಟಿ ಕೊಡಬೇಕಾದ ಸ್ಥಳ ಎಂದು ತಿಳಿಸಿದ್ದಾರೆ. ಲಕ್ಷದ್ವೀಪ ಸೌಂದರ್ಯ ಪ್ರದರ್ಶಿಸುವ ಫೋಟೋ ಶೇರ್ ಮಾಡಿದ ನಟಿ ಶ್ರದ್ಧಾ ಕಪೂರ್, ಇದನ್ನು ಮಿಸ್ ಮಾಡಿಕೊಳ್ಳುತ್ತೇನೆಂಬ ಭಯ ಶರುವಾಗಿದೆ ಎಂದು ತಿಳಿಸಿದ್ದಾರೆ. ''ಲಕ್ಷದ್ವೀಪವು ಪ್ರಾಚೀನ ಕಡಲತೀರಗಳನ್ನು ಹೊಂದಿದೆ. ಸ್ಥಳೀಯ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತಿದೆ. ಈ ಸೌಂದರ್ಯ ಸವಿಯಲು ನಾನು ರಜೆ ತೆಗೆದುಕೊಳ್ಳಲಿದ್ದೇನೆ. ಈ ವರ್ಷ #ExploreIndianIslands ಅನ್ನು ಏಕೆ ಮಾಡಬಾರದು'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ನಾಳೆ ಯಶ್ ಬರ್ತ್ಡೇ: 'ಟಾಕ್ಸಿಕ್' ಅಪ್ಡೇಟ್ಸ್ ನಿರೀಕ್ಷೆಯಲ್ಲಿ ಅಭಿಮಾನಿಗಳು
ಸಚಿನ್ ತೆಂಡೂಲ್ಕರ್ ಅವರು ಕಡಲತೀರದಲ್ಲಿ ಕ್ರಿಕೆಟ್ ಆಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ಅತಿಥಿ ದೇವೋ ಭವ" ಪರಿಕಲ್ಪನೆಯನ್ನು ತಮ್ಮ ಬರಹದಲ್ಲಿ ಉಲ್ಲೇಖಿಸಿದ್ದಾರೆ. ಕರಾವಳಿ ಪ್ರದೇಶಗಳು ನಾವು ಬಯಸಿದ ಎಲ್ಲವನ್ನೂ ಕೊಟ್ಟಿದೆ. ಅದ್ಭುತವಾದ ಆತಿಥ್ಯದೊಂದಿಗೆ ಸುಂದರ ಸ್ಥಳಗಳು ನಮಗೆ ನೆನಪುಗಳ ನಿಧಿಯಾಗಿದೆ. ಭಾರತ ಸುಂದರ ಕರಾವಳಿ ಮತ್ತು ಪ್ರಾಚೀನ ದ್ವೀಪಗಳಿಂದ ಆಶೀರ್ವದಿಸಲ್ಪಟ್ಟಿದೆ. ನಮ್ಮ "ಅತಿಥಿ ದೇವೋ ಭವ" ಪರಿಕಲ್ಪನೆಯೊಂದಿಗೆ ನಾವು ಅನ್ವೇಷಿಸಬೇಕಾಗಿರುವುದು ತುಂಬಾನೇ ಇದೆ. ನೆನಪುಗಳು ಸೃಷ್ಟಿಯಾಗಲು ಕಾಯುತ್ತಿವೆ ಎಂದು ಬರೆದುಕೊಂಡಿದ್ದಾರೆ. ಹೀಗೆ ಹಲವರು ಪ್ರತಿಕ್ರಿಯಿಸಿದ್ದು, #ExploreIndianIslands, #BoycottMaldives ಎಂಬುದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.
ಇದನ್ನೂ ಓದಿ:'Boycott Maldives' ಟ್ರೆಂಡಿಂಗ್: ಭಾರತ ನಿಂದಿಸಿದ ಮಾಲ್ಡೀವ್ಸ್ಗೆ ತಿರುಗೇಟು
ಜನವರಿ 4 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಲಕ್ಷದ್ವೀಪ ಸೌಂದರ್ಯ ಗುಣಗಾನ ಮಾಡಿದ ಬೆನ್ನಲ್ಲೇ, ಮಾಲ್ಡೀವ್ಸ್ ನಾಯಕರು ಪಿಎಂ ಮೋದಿ ಅವರ ಬಗ್ಗೆ ಅಸಮಾಧಾನ ಹೊರಹಾಕಿದರು. ಇದು ಸೋಷಿಯಲ್ ಮೀಡಿಯಾದಲ್ಲಿ "ಮಾಲ್ಡೀವ್ಸ್ ಬಹಿಷ್ಕರಿಸಿ" ("Boycott Maldives") ಟ್ರೆಂಡಿಂಗ್‌ಗೆ ಕಾರಣವಾಯಿತು.