ನಟ ರಮೇಶ್ ಅರವಿಂದ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಶಿವಾಜಿ ಸುರತ್ಕಲ್ 2 ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ' ಚಲನಚಿತ್ರವು ಎರಡು ವಾರಗಳ ಯಶಸ್ವಿ ಓಟದ ನಂತರ ಭರದಿಂದ ಮೂರನೇ ವಾರಕ್ಕೆ ಕಾಲಿಡುತ್ತಿದೆ. ಸಂಭ್ರಮದ ವಿಚಾರ ಏನೆಂದರೆ ಹಲವು ಉನ್ನತ ಮಟ್ಟದ ಸಾಧಕರು ಚಿತ್ರವನ್ನು ನೋಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ನೆಟ್ಫ್ಲಿಕ್ಸ್ನ ಇಂಡಿಯನ್ ಡಿಟೆಕ್ಟಿವ್ ಎನ್ನುವ ಸಾಕ್ಷ್ಯ ಚಿತ್ರದಲ್ಲಿ ಕಾಣಿಸಿಕೊಂಡ ಹಾಗೂ ಸೂಪರ್ ಕಾಪ್ ಎಂದೇ ಪ್ರಸಿದ್ಧರಾದ ರೈಲ್ವೆ ಡಿಐಜಿ ಶಶಿಕುಮಾರ್ ಅವರು ಚಿತ್ರದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಮುಖ್ಯವಾಗಿ ಚಿತ್ರದಲ್ಲಿ ಬರುವ ಪೊಲೀಸ್ ತನಿಖೆಯ ವಿಧಾನಗಳನ್ನು, ವಿಶೇಷವಾಗಿ ರಮೇಶ್ ಅರವಿಂದ್ ಅವರ ಪಾತ್ರವನ್ನು ಬಹಳ ಮೆಚ್ಚಿಕೊಂಡಿದ್ದಾರೆ.
ಇನ್ನು ಡಿಜಿಪಿ ಹಾಗೂ ಐಪಿಎಸ್ ಆಫೀಸರ್ ಆದ ರೂಪಾ ಮುದ್ಗಲ್ ಅವರು ಕೂಡಾ ಚಿತ್ರವನ್ನು ವೀಕ್ಷಿಸಿ ತಂಡದ ಪ್ರಯತ್ನದ ಬಗ್ಗೆ, ಆಕಾಶ್ ಶ್ರೀವತ್ಸ ಅವರ ನಿರ್ದೇಶನದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ವಿಶೇಷವಾಗಿ ಚಿತ್ರದಲ್ಲಿ ಮೇಘನಾ ಗಾಂವ್ಕರ್ ಅವರ ಪಾತ್ರವನ್ನು ಹೊಗಳಿದ್ದಾರೆ. ತಾನೂ ಕೂಡಾ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿ ಆಗಿರುವುದರಿಂದ, ಮೇಘನಾ ಅವರ ಪಾತ್ರ ಇನ್ನಷ್ಟು ಹತ್ತಿರವಾಯಿತು ಎಂದಿದ್ದಾರೆ.
ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಮಂಜುನಾಥ್ ಅವರು ಕೂಡ ಚಿತ್ರವನ್ನು ನೋಡಿದ್ದಾರೆ. ಚಿತ್ರವು ಅವರಿಗೆ ಬಹುವಾಗಿ ಮೆಚ್ಚುಗೆಯಾಗಿದ್ದು, ಹೀಗೆಯೇ ಭವಿಷ್ಯದಲ್ಲಿ ತಂಡವು ಮತ್ತಷ್ಟು ಶಿವಾಜಿ ಸುರತ್ಕಲ್ ಚಿತ್ರಗಳನ್ನು ತಯಾರಿಸಲಿ ಎಂದು ಶುಭಹಾರೈಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಿನ್ಸಿಪಲ್ ಸೆಕ್ರೆಟರಿ ಮಂಜುನಾಥ್ ಪ್ರಸಾದ್ ಅವರು ಕೂಡ ಚಿತ್ರವನ್ನು ನೋಡಿ ಮೆಚ್ಚಿ, ಚಿತ್ರವು ರೋಚಕವಾಗಿಯೂ, ಭಾವನಾತ್ಮಕವಾಗಿಯೂ ಇದೆ ಎಂದು ಹೇಳಿದರು.