ಕಲರ್ಸ್ ಕನ್ನಡ ವಾಹಿನಿ ಅಲ್ಲಿ ಹೊಸ ಕಥೆಯ ಧಾರವಾಹಿಯೊಂದು ಮನೆ ಮಂದಿಗೆಲ್ಲ ಮನೋರಂಜನೆ ನೀಡಲು ರೆಡಿಯಾಗಿದೆ. ಈಗಾಗಲೇ ಕಲರ್ಸ್ ಕನ್ನಡದಲ್ಲಿ ಒಲವಿನ ನಿಲ್ದಾಣ, ಕೆಂಡ ಸಂಪಿಗೆ, ಕನ್ನಡತಿ, ಗೀತಾ, ಗಿಣಿರಾಮ, ರಾಮಾಚಾರಿ, ಲಕ್ಷಣ, ನನ್ನರಸಿ ರಾಧೆಯಂತಹ ಜನಪ್ರಿಯ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಇವುಗಳ ಜೊತೆಗೆ ಹೊಸ ಭಾಗ್ಯಲಕ್ಷ್ಮೀ ಧಾರಾವಾಹಿ ಕೂಡ ಸೇಪರ್ಡೆಗೊಳ್ಳಲಿದೆ. ಅಕ್ಟೋಬರ್ 10 ರಿಂದ ಸಂಜೆ 7 ಗಂಟೆಗೆ ಪ್ರಸಾರವಾಗುವ ಈ ಧಾರಾವಾಹಿ ದೊಡ್ಡ ತಾರಾ ಬಳಗವನ್ನು ಹೊಂದಿದೆ.
ಅಕ್ಕ ತಂಗಿ ಬಾಂಧವ್ಯದ ಕಥೆ ಹೊಂದಿರುವ ಈ ಧಾರಾವಾಹಿಯಲ್ಲಿ ನಿರೂಪಕಿ ಸುಷ್ಮಾ ಕಥಾ ನಾಯಕಿಯಾಗಿ ನಟಿಸುತ್ತಿದ್ದು, ಬಿಗ್ ಬಾಸ್ ಖ್ಯಾತಿಯ ಶಮಂತ್ ಗೌಡ (ಬ್ರೋ ಗೌಡ), ಸುದರ್ಶನ್, ಪದ್ಮಜಾ ರಾವ್, ಭೂಮಿಕ, ತಾಂಡವ ಸೂರ್ಯವಂಶಿ ತಾರಾ ಬಳಗದಲ್ಲಿದ್ದಾರೆ. ಈ ಧಾರಾವಾಹಿ ಮೂಲಕ ಬಿಗ್ ಬಾಸ್ ಬ್ರೋ ಗೌಡ ಇದೇ ಮೊದಲ ಬಾರಿಗೆ ಸೀರಿಯಲ್ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡಿರುವ ಜೈ ಮಾತಾ ಕಂಬೈನ್ಸ್ ಭಾಗ್ಯಲಕ್ಷ್ಮೀ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ.
ನಿರೂಪಕಿ ಸುಷ್ಮಾ ಮಾತನಾಡಿ ಭಾಗ್ಯಲಕ್ಷ್ಮೀ ಮೂಲಕ ಹತ್ತು ವರ್ಷದ ನಂತರ ಮತ್ತೆ ಸೀರಿಯಲ್ನಲ್ಲಿ ನಟಿಸುತ್ತಿದ್ದೇನೆ. ಜೀವನದಲ್ಲಿ ಏನೇ ಬಂದರೂ ಅದನ್ನು ಖುಷಿಯಿಂದ ಸ್ವಾಗತಿಸಿ ಸುತ್ತ ಮುತ್ತಲಿನವರನ್ನು ಖುಷಿಯಿಂದ ಇಡುವುದು, ಮನೆಯ ಜವಾಬ್ದಾರಿಯನ್ನು ಹೊತ್ತು ಇಡೀ ಜೀವನವನ್ನೇ ಸಂಸಾರಕ್ಕಾಗಿ ಮುಡಿಪಾಗಿಟ್ಟಿರೋ ಹೆಣ್ಣು ಮಗಳ ಪಾತ್ರ. ತನ್ನ ಪ್ರೀತಿಯ ತಂಗಿಗೆ ಒಳ್ಳೆಯ ವರನನ್ನು ನೋಡಿ ಆಕೆಯನ್ನು ಮದುವೆ ಮಾಡಬೇಕು, ಆಕೆ ಖುಷಿಯಿಂದ ಇರಬೇಕು ಎಂಬ ಉದ್ದೇಶ ಇರುವ ಪಾತ್ರ ನನ್ನದು ಎಂದು ತಮ್ಮ ಪಾತ್ರದ ಬಗ್ಗೆ ತಿಳಿಸಿಕೊಟ್ರು.