ನೀವು ಯಾವುದೇ ಕ್ಷೇತ್ರ ತೆಗೆದುಕೊಳ್ಳಿ ಅಲ್ಲಿ ಕೆಲವೊಂದಿಷ್ಟು ವಿವಾದಗಳೋ, ಸಮಸ್ಯೆಗಳನ್ನು ಕಾಣುತ್ತೀರಿ. ಆ ಸಮಸ್ಯೆಯ ಪ್ರಮಾಣ ಏರುಪೇರಾಗಬಹುದಷ್ಟೇ. ಮನೋರಂಜನಾ ಉದ್ಯಮವೂ ಇದಕ್ಕೆ ಹೊರತಲ್ಲ. ಬಾಲಿವುಡ್ ಸೆಲೆಬ್ರಿಟಿಗಳು ಕೆಲ ವಿವಾದಕ್ಕೊಳಗಾಗಿ ಹೆಡ್ಲೈನ್ಸ್ ಆಗಿದ್ದುಂಟು. 2022ರಲ್ಲಿ ಬಾಲಿವುಡ್ನಲ್ಲಾದ ಏರಿಳಿತಗಳ ಕೆಲ ಮಾಹಿತಿ ಇಲ್ಲಿದೆ.
ಬಾಯ್ಕಾಟ್ ಪ್ರವೃತ್ತಿ: ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಗೂ ಮುನ್ನ ಟ್ವಿಟರ್ ಬಳಕೆದಾರರು #BoycottLaalSinghChaddha ಎಂಬ ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡ್ ಮಾಡಲು ಪ್ರಾರಂಭಿಸಿದರು. ಚಲನಚಿತ್ರವನ್ನು ವೀಕ್ಷಿಸದಂತೆ ಒಂದಿಷ್ಟು ಟ್ವಿಟರ್ ಬಳಕೆದಾರರ ಗುಂಪು ಪ್ರೇಕ್ಷಕರಲ್ಲಿ ಕೇಳಿದರು. ಚಿತ್ರದ ಸುತ್ತ ಟ್ರೋಲರ್ಗಳು ಆಟ ಶುರು ಮಾಡಿದರು. ಮೊದಲಿಗೆ, ಇದು ನಿಷ್ಪ್ರಯೋಜಕವೆಂಬತೆ ತೋರುತ್ತಿತ್ತು. ಆದರೆ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಈ ಚಿತ್ರ ಹಿನ್ನೆಡೆ ಆದಾಗ ಬಾಯ್ಕಾಟ್ನ ಪರಿಣಾಮದ ಬಗ್ಗೆ ಅರಿವಾಯಿತು.
ಕೆಲವು ಟ್ವಿಟ್ಟರ್ ಬಳಕೆದಾರರು ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಅವರ ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ಆನ್‌ಲೈನ್‌ನಲ್ಲಿ ವೈರಲ್ ಮಾಡಿದರು. ಪರಿಣಾಮ ಚಿತ್ರ ಯಶಸ್ವಿಯಾಗಲಿಲ್ಲ. ಲಾಲ್ ಸಿಂಗ್ ಚಡ್ಡಾ ಬಳಿಕ ಬ್ರಹ್ಮಾಸ್ತ್ರ ಸೇರಿದಂತೆ ಕೆಲ ಚಿತ್ರಗಳು ಬಾಯ್ಕಾಟ್ಗೆ ಒಳಗಾಗಿದ್ದವು.
ನಡಾವ್ ಲಪಿಡ್ ಹೇಳಿಕೆ:ಇಸ್ರೇಲ್ ಮೂಲದ ಚಲನಚಿತ್ರ ನಿರ್ಮಾಪಕ ಮತ್ತು ಐಎಫ್‌ಎಫ್‌ಐ (ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ) 2022ರ ತೀರ್ಪುಗಾರರ ಮುಖ್ಯಸ್ಥರಾಗಿದ್ದ ನಡಾವ್ ಲಪಿಡ್ ಹೇಳಿಕೆ ಭಾರಿ ಸದ್ದು ಮಾಡಿತ್ತು. ಉತ್ಸವದ ಸಮಾರೋಪ ಸಮಾರಂಭದಲ್ಲಿ, ತೀರ್ಪುಗಾರರ ಪರವಾಗಿ ತೀರ್ಪುಗಾರರ ಅಧ್ಯಕ್ಷರಾದ ನಡಾವ್ ಲಪಿಡ್ ಅವರು ಮಾತನಾಡಿದ್ದರು. 'ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರ ನೋಡಿದ ನಮಗೆಲ್ಲರಿಗೂ ನಿಜವಾಗಿಯೂ ಆಘಾತವಾಗಿದೆ. ಅಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾತ್ಮಕ ವಿಭಾಗಕ್ಕೆ ಅದು ಸೂಕ್ತವಲ್ಲ. ಅಸಭ್ಯ ಪ್ರಚಾರದ ಭಾಗ ಎಂದು ನಮಗನಿಸಿತು ಎಂದು ಹೇಳಿದ್ದರು. ಈ ಹೇಳಿಕೆ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತಾದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರೆ, ನಾನು ಕ್ಷಮೆ ಯಾಚಿಸುತ್ತೇನೆ ಎಂದು ನಡಾವ್ ಲಪಿಡ್ ಹೇಳಿದ್ದರು.