ಜರ್ಮನಿ ಪ್ರವಾಸದ ವೇಳೆ ಬಾಲಿವುಡ್ ನಟ ಅನಿಲ್ ಕಪೂರ್ ವ್ಯಕ್ತಿಯೊಬ್ಬನನ್ನು ಭೇಟಿ ಮಾಡಿದ್ದಾರೆ. ಆ ವ್ಯಕ್ತಿ ಭಾರತದ ಮೇಲಿನ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಭಾರತೀಯ ಸಿನಿಮಾ ಸಾಂಗ್ ಅನ್ನು ಆನಂದಿಸಿದ್ದಾರೆ. ಈ ವಿಡಿಯೋವನ್ನು ಸ್ವತಃ ಅನಿಲ್ ಕಪೂರ್ ಶೇರ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಜರ್ಮನಿಯ ಮ್ಯೂನಿಚ್ (Munich) ನಲ್ಲಿ ವ್ಯಕ್ತಿಯೊಬ್ಬರು ಅನಿಲ್ ಕಪೂರ್ ಅವರ 1989ರ 'ರಾಮ್ ಲಖನ್' ಸಿನಿಮಾದ ಜನಪ್ರಿಯ ಹಾಡು 'ಮೈ ನೇಮ್ ಈಸ್ ಲಖನ್' ಅನ್ನು ಕೇಳಿ ಆನಂದಿಸುತ್ತಿರುವ ವಿಡಿಯೋವನ್ನು ಸ್ವತಃ ನಟ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ವ್ಯಕ್ತಿ ಬೀದಿಯಲ್ಲಿ ಕುಳಿತು ಜನಪ್ರಿಯ ಹಾಡನ್ನು ಆನಂದಿಸುತ್ತಿದ್ದು, ಅನಿಲ್ ಕಪೂರ್ ಆ ವ್ಯಕ್ತಿಯನ್ನು ಮಾತನಾಡಿಸಿದ್ದಾರೆ.
ನಟ ಅನಿಲ್ ಕಪೂರ್ ಆ ವ್ಯಕ್ತಿ ಬಳಿ, ಈ ಹಾಡು ನಿಮಗೆ ಎಲ್ಲಿಂದ ಸಿಕ್ಕಿತು? ನೀವು ಈ ಹಾಡನ್ನು ಆನಂದಿಸುತ್ತೀರಾ? ನೀವು ಎಲ್ಲಿಂದ ಬಂದಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ನಟನ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವ್ಯಕ್ತಿ, ನಾನು ಟ್ರಾನ್ಸಿಲ್ವೇನಿಯಾ (Transylvania, Romania) ದಿಂದ ಬಂದಿದ್ದೇನೆ, ನಾನು ಭಾರತವನ್ನು ಪ್ರೀತಿಸುತ್ತೇನೆ ಎಂದು ತಿಳಿಸಿದ್ದಾರೆ. ಇದು ಬಾಲಿವುಡ್ ನಟ ಅನಿಲ್ ಕಪೂರ್ ಅವರ ಹಾಡು ಎಂದು ಆ ಅಭಿಮಾನಿಗೆ ತಿಳಿದಿದೆ. ಆದ್ರೆ ಎದುರಿದ್ದ ಅನಿಲ್ ಕಪೂರ್ ಅವರನ್ನು ಗುರುತಿಸುವಲ್ಲಿ ಆ ವ್ಯಕ್ತಿ ವಿಫಲರಾದರು.
ಬಾಲಿವುಡ್ ನಟ ಅನಿಲ್ ಕಪೂರ್ ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ''ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾಗ ನನ್ನ ಹಳೇ ಕಾಲವನ್ನು ಭೇಟಿಯಾದೆ. ಈ ಐಕಾನಿಕ್ ಹಾಡು ಪ್ರಪಂಚದ ವಿವಿಧ ಭಾಗಗಳಲ್ಲಿ ಇನ್ನೂ ಪ್ರತಿಧ್ವನಿಸುತ್ತದೆ. ಮ್ಯೂನಿಚ್‌ನಲ್ಲಿ ಟ್ರಾನ್ಸಿಲ್ವೇನಿಯಾದ ಜೆಂಟಲ್ಮ್ಯಾನ್ನನ್ನು ಭೇಟಿಯಾದೆ" ಎಂದು ತಿಳಿಸಿದರು.