ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ಬಾಲಿವುಡ್ ಅಂಗಳದ ಅತ್ಯಂತ ಪ್ರೀತಿಪಾತ್ರ ಜೋಡಿ. ತಾರಾ ಜೋಡಿ ನಿನ್ನೆ ತಮ್ಮ ಏಳನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡರು. ಧೂಮ್ 2 ಚಿತ್ರದಲ್ಲಿ ಓರ್ವ ನಾಯಕಿಯಾಗಿ ಅಭಿನಯಿಸಿದ್ದ ನಟಿ ಬಿಪಾಶಾ ಬಸು ಭಾನುವಾರ ರಾತ್ರಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಮ್ಮ ಮದುವೆ ವಾರ್ಷಿಕೋತ್ಸವದ ಸುಂದರ ವಿಡಿಯೋ ಹಂಚಿಕೊಂಡಿದ್ದಾರೆ.
ಈ ಜೋಡಿ ಯಾವಾಗಲೂ ಗಂಡ ಹೆಂಡತಿ ಸಂಬಂಧದ, ಅನ್ಯೋನ್ಯತೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಡೇಟ್ಗಳನ್ನು ನೀಡುತ್ತಲೇ ಇರುತ್ತಾರೆ. ಫೋಟೋಗಳು ಅಥವಾ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ, ತಮ್ಮ ಅಭಿಮಾನಿಗಳ ಜೊತೆ ಟಚ್ ಅಲ್ಲಿ ಇರುತ್ತಾರೆ. ನಟಿ ಬಿಪಾಶಾ ಹಾಗೂ ನಟ ಕರಣ್ ಸಿಂಗ್ ಗ್ರೋವರ್ 2015 ರಲ್ಲಿ ತೆರೆಕಂಡ ಅಲೋನ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಅಲೋನ್ ಸಿನಿಮಾದ ಸೆಟ್ನಿಂದಲೇ ಆತ್ಮೀಯವಾಗಿದ್ದ ಇಬ್ಬರು ಅಲ್ಲಿಂದಲೇ ಪ್ರೀತಿಸಲು ಆರಂಭಿಸಿದ್ದರು. 2016 ಏಪ್ರಿಲ್ 30 ರಂದು ಈ ಸ್ಟಾರ್ ಕಪಲ್ ಹಸೆಮಣೆ ಏರಿದ್ದರು. ಮದುವೆಯಾದ ಆರು ವರ್ಷಗಳ ಬಳಿಕ 2022 ರ ನವೆಂಬರ್ನಲ್ಲಿ ಇವರು ತಮ್ಮ ಮೊದಲ ಮಗುವನ್ನು ಆಹ್ವಾನಿಸಿದ್ದರು. ಹೆಣ್ಣು ಮಗುವನ್ನು ಮನೆ ತುಂಬಿಸಿಕೊಂಡಿದ್ದರು.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಂಡಿರುವ ಬಿಪಾಶಾ, "ನಾವು ಗಂಡ-ಹೆಂಡತಿಯಾಗಿ ಸುಂದರವಾದ 7 ವರ್ಷಗಳು ಪೂರೈಸಿದೆವು. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಪ್ರೀತಿಯೇ #monkeylove #monkeyversary #brunch #settemara #stregismumbai #mybestfriend" ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ, ಬಿಪಾಶಾ ಮತ್ತು ಕರಣ್ ಕ್ಯಾಶುಯಲ್ ಕಪ್ಪು ಬಟ್ಟೆಗಳಲ್ಲಿ ಜೊತೆಯಾಗಿರುವುದನ್ನು ಕಾಣಬಹುದು. ವಿಡಿಯೊದ ಆರಂಭದಲ್ಲಿ ದಂಪತಿ ನೃತ್ಯ ಮಾಡುವುದನ್ನು ಕಾಣಬಹುದು ಮತ್ತು ನಂತರ ಅವರ ಮದುವೆ ವಾರ್ಷಿಕೋತ್ಸವದ ಕೇಕ್ ಕತ್ತರಿಸುವುದು. ಬಾಯಲ್ಲಿ ನೀರೂರಿಸುವ ಮ್ಯಾಂಗೋ ಕೇಕ್ ಅನ್ನು ಒಬ್ಬರಿಗೊಬ್ಬರು ತಿನ್ನಿಸುವುದೂ ಬಹಳ ಸುಂದರವಾಗಿ ಕಂಡುಬಂದಿದೆ.