ಬಿಗ್ ಬಾಸ್ ಕನ್ನಡ ಸೀಸನ್ 10 ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ರಿಯಾಲಿಟಿ ಶೋ ಎರಡನೇ ವಾರಕ್ಕೆ ಕಾಲಿಟ್ಟಿದ್ದು ಸ್ಪರ್ಧಿಗಳ ಪ್ರೀತಿ-ಸ್ನೇಹ-ವಿಶ್ವಾಸಕ್ಕೆ ಪರೀಕ್ಷೆ ಎದುರಾದಂತಿದೆ. ಅಸಲಿ ಆಟ ಈಗ ಶುರುವಾಗಿರುವಂತೆ ತೋರುತ್ತಿದೆ. ಅದರ ಸುಳಿವು ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಸಿಕ್ಕಿದೆ.
'ಕಾರ್ತಿಕ್-ವಿನಯ್ ಸ್ನೇಹದಲ್ಲಿ ಸಂಗೀತಾವೆಂಬ ಅಪಸ್ವರ?' ಎಂಬ ಶೀರ್ಷಿಕೆ ಕೊಟ್ಟು ಕಲರ್ಸ್ ಕನ್ನಡ ಸೋಷಿಯಲ್ ಮೀಡಿಯಾದಲ್ಲಿ ಪ್ರೋಮೋ ಅನಾವರಣಗೊಳಿಸಿದೆ. ಇದು ಆನ್ಲೈನ್ಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಬಿಗ್ ಬಾಸ್ ಎಂಬ ದೊಡ್ಮನೆಯೊಳಗೆ ಹೋದಾಗಿನಿಂದಲೂ ಸಂಗೀತಾ ಹಾಗೂ ಕಾರ್ತಿಕ್ ಉತ್ತಮ ಸ್ನೇಹಿತರಾಗಿ ಗುರುತಿಸಿಕೊಂಡಿದ್ದಾರೆ. ಟಾಸ್ಕ್, ನಾಮಿನೇಷನ್ ಸೇರಿದಂತೆ ಹೆಚ್ಚಿನ ಸಂದರ್ಭಗಳಲ್ಲಿ ಇಬ್ಬರೂ ಈವರೆಗೆ ಪರಸ್ಪರ ಸಪೋರ್ಟಿವ್ ಆಗಿ ನಡೆದುಕೊಂಡಿದ್ದಾರೆ. ಈ ಸ್ಪರ್ಧಿಗಳ ಸ್ನೇಹಕ್ಕೀಗ ಪರೀಕ್ಷೆ ಎದುರಾಗಿದೆ.
'ಎಲ್ಲರೂ ಒಂದ್ ಕಡೆ ಇದ್ರೆ, ನೀನು ಮಾತ್ರ ಒಂದ್ ಕಡೆ ಇರ್ತೀಯಾ. ಹದಿನಾರು ಜನರಲ್ಲಿ ಬೇರೆ ಯಾರೂ ಕಾಣಿಸ್ಲಿಲ್ವಾ? ನಾನು ಏನ್ ಮಾಡಿದೀನಿ ನಿಂಗೆ?' ಎಂದು ಒಂದು ಕಡೆ ವಿನಯ್ ಏರುದನಿಯಲ್ಲಿ ಕಾರ್ತಿಕ್ ಅವರನ್ನು ಪ್ರಶ್ನಿಸುತ್ತಿದ್ದಾರೆ. ಮತ್ತೊಂದೆಡೆ ಸಂಗೀತಾ, 'ಅವ್ರಿಗೆ ಯಾರೂ ಬೆರಳು ತೋರಿಸಬಾರದು. ತೋರಿಸಿದರೆ ಅವರು ಸಿಟ್ಟಿಗೇಳ್ತಾರೆ' ಎಂದು ವಿನಯ್ ಬಗ್ಗೆ ತಣ್ಣಗೆ ಹೇಳುತ್ತಾರೆ. 'ಸಗಣಿ ಮೇಲೆ ಕಾಲಿಟ್ರೆ ಏನು ಮಾಡ್ತೀಯಾ?' ಎಂಬುದು ವಿನಯ್ ಪ್ರಶ್ನೆ. 'ಐ ನೋ… ಇಲ್ಲಿ ಯಾರೂ ನಮ್ಮೋರಲ್ಲ' ಅನ್ನೋದು ಸಂಗೀತಾ ಅವರು ಕಾರ್ತಿಕ್‌ಗೆ ಹೇಳುತ್ತಿರುವ ಭಾವುಕ ನುಡಿ. 'ಇಲ್ಲಾ ನಾನಾ..ಇಲ್ಲಾ ಅವಳಾ?' ಇದು ವಿನಯ್ ಅವರ ಖಡಕ್ ಪ್ರಶ್ನೆ. 'ನೀವು ನನ್ ಜೊತೆ ಇರಿ, ಇಲ್ದೇ ಇರಿ, ಐ ಫೈಟ್ ಮೈ ಫೈಟ್' ಎಂದು ಕೊನೆಯ ಮಾತು ಎಂಬಂತೆ ಹೇಳಿ ಸಂಗೀತಾ ಎದ್ದು ಹೋಗಿದ್ದಾರೆ. 'ವಾರ್ ಡಿಕ್ಲೇರ್ ಮಾಡಿದ್ದಾರೆ. ವಾರ್ ಮಾಡೋಣ' ಎಂಬುದು ವಿನಯ್ ಕೊನೆಯ ಮಾತು.