ಹದಿಮೂರು ವಾರ ಕಳೆದು ಹದಿನಾಲ್ಕನೇ ವಾರಕ್ಕೆ ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ ಕಾಲಿಟ್ಟಿದೆ. ಕಳೆದ ವಾರ ಮೈಕಲ್ ಎಲಿಮಿನೇಟ್ ಆಗಿದ್ದಾರೆ. ಹದಿನಾಲ್ಕನೇ ವಾರದ ಆರಂಭ ಬಿಸಿಯಾಗಿದೆ. #JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಇದರ ಸುಳಿವು ಸಿಕ್ಕಿದೆ.
ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ವಿನಯ್, ಪ್ರತಾಪ್ ವಿರುದ್ಧ ಹರಿಹಾಯ್ದಿದ್ದಾರೆ. "ಅಮಾಯಕನ ಹಾಗೆ ವೇಷ ಹಾಕಿಕೊಂಡು, ಎಲ್ಲರಿಗೂ ಬೂದಿ ಎರಚಿಕೊಂಡು ಇರುವುದೆಂದರೆ ಅದು ಪ್ರತಾಪ್" ಎಂದು ಅವರು ಹೇಳಿದ್ದಾರೆ. ಸಾಮಾನ್ಯವಾಗಿ ಇಂಥ ಟೀಕೆಗಳಿಗೆ ತಣ್ಣಗೆ ಉತ್ತರಿಸುತ್ತಿದ್ದ ಡ್ರೋಣ್ ಪ್ರತಾಪ್ ಈ ಬಾರಿ ಗರಂ ಆಗಿದ್ದಾರೆ. ಅಷ್ಟೇ ಅಲ್ಲ, ಧ್ವನಿ ಎತ್ತರಿಸಿ ವಿನಯ್ ವಿರುದ್ಧ ಮಾತಾಡಿದರು.
"ನೀವು ಅಂದ ಹಾಗೆಲ್ಲಾ ಅನ್ನಿಸಿಕೊಂಡು ಇರುವುದಕ್ಕೆ ಸಾಧ್ಯವಿಲ್ಲ. ಪರಿಣಾಮ ನೆಟ್ಟಗಿರುವುದಿಲ್ಲ" ಎಂದು ಖಾರವಾಗಿಯೇ ಮರುತ್ತರ ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ ವಿನಯ್, "ನೀನು ಆಡ್ತಿರೋ ನಾಟಕ ನಂಗೆ ಗೊತ್ತಿಲ್ವೇನೋ? ಏನೋ ಮಾಡ್ತೀಯಾ ನೀನು?" ಎಂದು ಕೂಗಾಡಿದ್ದಾರೆ. ಪ್ರತಾಪ್ ಕೂಡ ಅಷ್ಟೇ ದೊಡ್ಡದಾಗಿ, "ನೀಟಾಗಿ ಮಾತಾಡೋದು ಕಲ್ತುಕೊಳ್ಳಿ. ನಾನು ಮಾತುಗಳ ಮುಖಾಂತರ ಉತ್ತರ ಕೊಡ್ತೀನಿ" ಎಂದು ಹೇಳಿದ್ದಾರೆ. ವಿನಯ್, "ನೀನು ನನಗೆ ಹೇಳಿಕೊಡಬೇಕಾಗಿಲ್ಲ. ಹೋಗಲೇ" ಎಂದಿದ್ದಾರೆ. ಸಂಗೀತಾ ಮತ್ತು ತುಕಾಲಿ ಸಂತೋಷ್ ಎಲ್ಲರೂ ಸೇರಿಕೊಂಡು ಜಗಳ ತಪ್ಪಿಸಲು ಯತ್ನಿಸುತ್ತಿರುವ ದೃಶ್ಯವನ್ನು ಪ್ರೋಮೊದಲ್ಲಿ ನೋಡಬಹುದು.
ಹಾಗಾದರೆ, ಈ ವಾರ ಶೋ, ವಿನಯ್ ಮತ್ತು ಪ್ರತಾಪ್ ನಡುವಿನ ಯುದ್ಧಕ್ಕೆ ಸಾಕ್ಷಿಯಾಗಲಿದೆಯಾ? ಹಾಗಾದಲ್ಲಿ ಉಳಿದ ಸದಸ್ಯರು ಯಾರ ಪರ ನಿಂತುಕೊಳ್ಳುತ್ತಾರೆ? ಫಿನಾಲೆಗೆ ಕೆಲವೇ ಹೆಜ್ಜೆಗಳ ದೂರದಲ್ಲಿರುವಾಗ ಮತ್ತೆ ಏರುತ್ತಿರುವ ಕಾವು ಮನೆಯ ಪರಿಸ್ಥಿತಿಯನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಲಿದೆ? ಈ ಎಲ್ಲ ಪ್ರಶ್ನೆಗಳಿಗೆ ಮುಂದಿನ ಎಪಿಸೋಡ್ಗಳೇ ಉತ್ತರಿಸಬೇಕು. ಪ್ರತಿದಿನದ ಎಪಿಸೋಡ್‌ಗಳನ್ನು #ColorsKannadaದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ:''ನನ್ನತ್ರ ಬೇಡ, ನಾನ್ ಸರಿಯಿಲ್ಲ'': ಬಿಗ್ ಬಾಸ್ ಸ್ಪರ್ಧಿಗಳಿಗೆ ಕಿಚ್ಚನ ವಾರ್ನಿಂಗ್