ಮುಂಬೈ: ಹಿಟ್ ಸ್ಟ್ರೀಮಿಂಗ್ ಶೋ ಫಾರ್ಜಿ (Farzi) ಯಲ್ಲಿ ತಮ್ಮ ಕೆಲಸದಿಂದ ಪ್ರೇಕ್ಷಕರನ್ನು ಮೋಡಿ ಮಾಡಿದ ನಟ ಭುವನ್ ಅರೋರಾ (Bhuvan Arora) ಅವರು ಮುಂದೆ ಸ್ಟಾರ್ ನಿರ್ದೇಶಕ ಕಬೀರ್ ಖಾನ್ ಅವರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಭುವನ್ ಅರೋರಾ ಅವರು ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್ ಜೊತೆ ಕೆಲಸ ಮಾಡಲಿದ್ದಾರೆ. ಕಬೀರ್ ಖಾನ್ ಭಜರಂಗಿ ಭಾಯಿಜಾನ್, ಏಕ್ ಥಾ ಟೈಗರ್ ಮತ್ತು 83 ನಂತಹ ಚಿತ್ರಗಳನ್ನು ನಿರ್ದೇಶಿಸಿ ಹೆಸರುವಾಸಿ ಆಗಿದ್ದಾರೆ.
ಬಹುಬೇಡಿಕೆ ನಟ ಕಾರ್ತಿಕ್ ಆರ್ಯನ್ ಅವರೊಂದಿಗೆ ಸಹ ನಾಯಕರಾಗಿ, ಭುವನ್ ಅರೋರಾ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂಬರುವ ಯೋಜನೆ, ಕಬೀರ್ ಖಾನ್ ಮತ್ತು ಕಾರ್ತಿಕ್ ಆರ್ಯನ್ ಜೊತೆ ಕೆಲಸ ಮಾಡುವ ಬಗ್ಗೆ ಮಾಧ್ಯಮಗಳೊಂದಿಗೆ ನಟ ಭುವನ್ ಅರೋರಾ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. "ಕಬೀರ್ ಸರ್ ಅವರೊಂದಿಗೆ ಕೆಲಸ ಮಾಡಲು ನಾನು ಬಹಳ ಉತ್ಸುಕನಾಗಿದ್ದೇನೆ ಮತ್ತು ಇದು ನನಗೆ ಅತ್ಯಂತ ಸಂತೋಷಕರ ವಿಷಯ. ನಾನು ಯಾವಾಗಲೂ ಅವರ ಚಲನಚಿತ್ರಗಳು ಮತ್ತು ಅವರು ಹೇಳಲು ಬಯಸುವ ಕಥೆಗಳ ಆಯ್ಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ" ಎಂದು ಹೇಳಿದ್ದಾರೆ.
ನಟ ಭುವನ್ ಅರೋರಾ ಅವರು ಮತ್ತಷ್ಟು ಮಾತನಾಡಿ, "ಇದು ತುಂಬಾ ಸವಾಲಿನ ಚಿತ್ರವಾಗಿದ್ದು, ಸಾಕಷ್ಟು ಪೂರ್ವಸಿದ್ಧತಾ ಕೆಲಸದ ಅಗತ್ಯ ಇರುತ್ತದೆ. ಮುಂಬರುವ ಈ ಚಿತ್ರವು ನೈಜ ಕಥೆಯನ್ನು ಆಧರಿಸಿದೆ. ನಾನು ಈವರೆಗೆ ಎಂದಿಗೂ ನಟಿಸದ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ" ಎಂದು ತಿಳಿಸಿದ್ದಾರೆ. ಹಾಗಾಗಿ ಸಹಜವಾಗಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಇದಕ್ಕೂ ಮೊದಲು, ಸ್ಟ್ರೀಮಿಂಗ್ ಸೀರಿಸ್ ಫಾರ್ಜಿಯಲ್ಲಿ ( Farzi ) ತನ್ನ ನಟನೆಯಿಂದ ವೀಕ್ಷಕರನ್ನು ಆಕರ್ಷಿಸಿದ ಯುವ ನಟನಿಗೆ IMDb ಇಂದ STARmeter ಪ್ರಶಸ್ತಿಯನ್ನು ನೀಡಲಾಯಿತು.