ಕೋಲ್ಕತ್ತಾ (ಪಶ್ಚಿಮ ಬಂಗಾಳ): ಬೆಂಗಾಲಿ ಕಿರುತೆರೆಯ ಜನಪ್ರಿಯ ನಟಿ ಸುಚಂದ್ರ ದಾಸ್‌ಗುಪ್ತ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಶನಿವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಟಿ ಸುಚಂದ್ರ ಅಕಾಲಿಕ ನಿಧನದಿಂದ ಕಿರುತೆರೆ ರಂಗ ದುಃಖದಲ್ಲಿ ಮುಳುಗಿದೆ.
ಸುಚಂದ್ರ ಕೋಲ್ಕತ್ತಾದ ಉತ್ತರ ಭಾಗದ ಪ್ರದೇಶದಲ್ಲಿ ರಾತ್ರಿ ತಮ್ಮ ಶೂಟಿಂಗ್ ಕೆಲಸ ಮುಗಿಸಿ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದರು. ಆದರೆ, ಈ ವೇಳೆ ಅತಿವೇಗದಿಂದ ಬಂದ ಲಾರಿಯೊಂದು ಇವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ನಟಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಅಪಘಾತದ ನಂತರ ಸ್ಥಳೀಯ ಜನತೆ ಪ್ರತಿಭಟನೆ ನಡೆಸಿದ್ದಾರೆ. ಭಾರೀ ವಾಹನಗಳನ್ನು ನಿಯಂತ್ರಿಸಲು ಪೊಲೀಸರು ವಿಫಲರಾಗಿದ್ದಾರೆ. ಇದರ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಪ್ರತಿಭಟನಾನಿರತ ಜನರು ಆಕ್ರೋಶ ಹೊರಹಾಕಿದ್ದಾರೆ.
ಲಾರಿ ಚಾಲಕ ಪೊಲೀಸ್ ವಶಕ್ಕೆ: ಸುಮಾರು ಹೊತ್ತು ಸ್ಥಳೀಯರು ಪ್ರತಿಭಟನೆ ನಡೆಸಿದ್ದರಿಂದ ಈ ರಸ್ತೆ ಮಾರ್ಗದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ನಂತರ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದರು. ಅಲ್ಲದೇ, ಅಪಘಾತಕ್ಕೆ ಕಾರಣವಾದ ಚಾಲಕನನ್ನು ಬಂಧಿಸಿ ಲಾರಿಯನ್ನೂ ವಶಕ್ಕೆ ಪಡೆದಿದ್ದಾರೆ.
ಮೃತ ಸುಚಂದ್ರ ಬೆಂಗಾಲಿ ಕಿರುತೆರೆಯ ಪ್ರಸಿದ್ಧ ನಟಿಯಾಗಿದ್ದರು. ಅವರು ಅನೇಕ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದರು. 'ಗೌರಿ' ಚಿತ್ರದಲ್ಲಿನ ಅಭಿನಯಕ್ಕಾಗಿ ತುಂಬಾ ಪ್ರಸಿದ್ಧಯನ್ನೂ ಇವರು ಪಡೆದಿದ್ದರು. ಅಲ್ಲದೇ, ಇದು ಬೆಂಗಾಲಿ ಕಿರುತೆರೆ ರಂಗದಲ್ಲಿ ಅವರು ಜನಪ್ರಿಯತೆಯನ್ನೂ ತುಂಬಾ ಹೆಚ್ಚಿತ್ತು. ಸುಚಂದ್ರ ಹೆಸರುವಾಸಿ ನಟಿಯಾಗಿರುವುದರ ಜೊತೆಗೆ ತಮ್ಮ ಲವಲವಿಕೆಯಿಂದ ಕೂಡಿದ ನಡವಳಿಕೆಯಿಂದ ಅನೇಕರಿಗೆ ಆಪ್ತರಾಗಿದ್ದರು. ದೊಡ್ಡ ಅಭಿಮಾನಿ ಬಳಗವನ್ನೂ ಹೊಂದಿದ್ದರು. ಆದರೆ, ಅಕಾಲಿಕ ಸಾವು ಅವರ ಅಭಿಮಾನಿಗಳಿಗೂ ನೋವುಂಟು ಮಾಡಿದೆ.