ಬಾಗಲಕೋಟೆ: ನಗರದ ಯುವಕ ಸಚಿನ ಪುರೋಹಿತ ಗಾಂಧೀ ನಗರದಲ್ಲಿ ಚಿತ್ರರಂಗದ ನಂಟು ಬೆಳೆಸಿಕೊಂಡು ತನ್ನದೇ ಸ್ವಂತ ಚಿತ್ರ ನಿರ್ಮಿಸಿ ಗಮನ ಸೆಳೆದಿದ್ದಾರೆ. ಸಿಂಧೂರ ಸಿನಿಮಾ ಇದೇ 14ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
ಸಿಂಧೂರ ಚಲನಚಿತ್ರದ ನಾಯಕ ನಟನಾಗಿ ಸಚಿನ್ ಪುರೋಹಿತ ಅಭಿನಯಿಸಿದ್ದು, ನಟಿಯರಾಗಿ ನಿರೀಕ್ಷಾ ನಾಯ್ಡು ಹಾಗೂ ಸುರಕ್ಷಿತಾ ಎಂಬುವರು ಅಭಿನಯಿಸಿದ್ದಾರೆ. ಪ್ರೇಮ ಕಥೆಯನ್ನು ಆಧರಿಸಿರುವ ಈ ಸಿನಿಮಾದ ಶೂಟಿಂಗ್ ಬೆಂಗಳೂರು, ಮೈಸೂರು, ಸಕಲೇಶಪುರ ಸೇರಿದಂತೆ ಹಲವೆಡೆ ನಡೆಸಲಾಗಿದೆ. ಸಿನಿಮಾ ಪ್ರಮೋಷನ್ ಅಂಗವಾಗಿ ಬಾಗಲಕೋಟೆ ನಗರದ ವಾಸವಿ ಚಿತ್ರಮಂದಿರಲ್ಲಿ ಮಾತ್ರ ಒಂದು ವಾರ ಉಚಿತ ಸಿನಿಮಾ ಶೋ ಏರ್ಪಡಿಸಲಾಗಿದೆ.
ಸಿಂಧೂರ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಾಗಲಕೋಟೆ ಯುವಕನ ಎಂಟ್ರಿ ಸಚಿನ ಪುರೋಹಿತನ ತಂದೆ ದಿ. ರಾಮ ಪುರೋಹಿತ ಅವರು ಸಿನಿಮಾಗಳಿಗೆ ಕ್ಯಾಮರಾಗಳನ್ನು ಬಾಡಿಗೆ ರೂಪದಲ್ಲಿ ನೀಡುತ್ತಾ ಚಿತ್ರರಂಗದ ನಂಟು ಬೆಳೆಸಿಕೊಂಡು ಬಂದಿದ್ದರು. ಸಚಿನ ಪುರೋಹಿತ ಸಿನಿಮಾ ಮೇಲೆ ಅಸಕ್ತಿ ಬೆಳೆಸಿಕೊಂಡು ಕೆಲ ಚಿತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿದ್ದರು. ಈಗ ಸ್ವಂತ ಶಕ್ತಿಯ ಮೇಲೆ ತಂದೆಯ ಆಶಯದಂತೆ ಸಿಂಧೂರ ಸಿನಿಮಾ ಮೂಲಕ ನಟನಾಗಿ ಹೊರಹೊಮ್ಮಲು ರೆಡಿಯಾಗಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಬನಾರಸ್ ಸಿನಿಮಾ ವಿತರಣಾ ಹಕ್ಕು ಡಿ ಬೀಟ್ಸ್ ತೆಕ್ಕೆಗೆ
ತಂದೆ ರಾಮ ಪುರೋಹಿತ ಕೊರೊನಾ ಸಮಯದಲ್ಲಿ ಮೃತಪಟ್ಟಿದ್ದಾರೆ. ತಂದೆಯ ಸ್ಮರಣಾರ್ಥ ಅಂಗವಾಗಿ ಹಾಗೂ ಬಾಗಲಕೋಟೆ ಜನತೆ ಪ್ರೀತಿ ವಿಶ್ವಾಸಕ್ಕಾಗಿ ಒಂದು ವಾರಗಳ ಕಾಲ ವಾಸವಿ ಚಿತ್ರಮಂದಿರಗಳಲ್ಲಿ ಉಚಿತ ಪ್ರದರ್ಶನ ನೀಡಲು ಸಚಿನ ಪುರೋಹಿತ ಮುಂದಾಗಿದ್ದಾರೆ. ಪ್ರತಿಯೊಬ್ಬರು ಸಿನಿಮಾ ನೋಡಿ ಹಾರೈಸುವಂತೆ ನಟ ಸಚಿನ ಪುರೋಹಿತ ಮನವಿ ಮಾಡಿದ್ದಾರೆ. ಬಾಗಲಕೋಟೆ ಮೂಲದ ಹುಡುಗನಾಗಿ ಸಿನಿಮಾ ನಟನಾಗಿದ್ದೇನೆ, ಆಶೀರ್ವಾದ ಮಾಡಿ, ಬಾಗಲಕೋಟೆ ಹುಡುಗನನ್ನು ಬೆಳೆಸಿರಿ ಎಂದು ಜನತೆಗೆ ಮನವಿ ಮಾಡಿಕೊಂಡಿದ್ದಾರೆ.