ಹಿಂದಿ ಚಿತ್ರರಂಗದ ಹಿರಿಯ ನಟ ಅನುಪಮ್ ಖೇರ್ ತಮ್ಮ ಅಮೋಘ ಅಭಿನಯದಿಂದ ಸಿನಿಪ್ರಿಯರ ಮನಸು ಗೆದ್ದವರು. ಈವರೆಗೆ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ಅಭಿನಯಿಸಿದ್ದಾರೆ. ಇದೀಗ 5ಕ್ಕೂ ಹೆಚ್ಚು ಸಿನಿಮಾಗಳು ಖೇರ್ ಕೈಯಲ್ಲಿದೆ. ಇವುಗಳಲ್ಲಿ ಕೆಲವು ಈ ವರ್ಷ, ಇನ್ನು ಕೆಲವು ಮುಂದಿನ ವರ್ಷ ಬಿಡುಗಡೆಯಾಗಲಿದೆ.
ಅನುಪಮ್ ಖೇರ್ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಸಕ್ರಿಯರು. ಪ್ರತಿದಿನ ಸಿನಿಮಾ, ದೈನಂದಿನ ಜೀವನ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಪೋಸ್ಟ್‌ಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಲೇಟೆಸ್ಟ್ ಪೋಸ್ಟ್ ವಿಶೇಷವಾಗಿದ್ದು, ಹೆಚ್ಚಿನವರ ಗಮನ ಸೆಳೆದಿದೆ. ತಮ್ಮ ಅಭಿಮಾನಿಗಳಿಗಾಗಿ ಸ್ಪೆಷಲ್ ವಿಡಿಯೋವನ್ನು ಅವರು ಶೇರ್ ಮಾಡಿದ್ದಾರೆ. ಇದರಲ್ಲಿ ಅವರು ಪಿಯಾನೋ, ಸಂಗೀತ ಕಲಿಯುತ್ತಿರುವುದನ್ನು ಕಾಣಬಹುದು. ಇಷ್ಟೇ ಅಲ್ಲ, ನಟನೊಂದಿಗೆ ಆರ್ಆರ್ಆರ್ ಖ್ಯಾತಿಯ ಎಂ.ಎಂ.ಕೀರವಾಣಿ ಇದ್ದು, ಪೋಸ್ಟ್ ಬಹಳ ಸದ್ದಾಗುತ್ತಿದೆ.
ಅನುಪಮ್ ಖೇರ್ ಹಂಚಿಕೊಂಡಿರುವ ಈ ವಿಡಿಯೋ ಸಿಂಪಲ್ ಅನ್ನೋ ಹಾಗಿಲ್ಲ. ಏಕೆಂದರೆ ಅವರು ಸೌತ್ ಸಿನಿಮಾ ಇಂಡಸ್ಟ್ರಿ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಆರ್ಆರ್ಆರ್ ಚಿತ್ರದ ಸಂಗೀತ ಸಂಯೋಜಕರೊಂದಿಗಿದ್ದಾರೆ. ಆಸ್ಕರ್ ವಿಜೇತ ನಾಟು-ನಾಟು ಹಾಡಿನ ಸಂಯೋಜಕ ಕೀರವಾಣಿ ಅವರಿಂದ ಸಂಗೀತ ತರಗತಿ ಪಡೆದುಕೊಳ್ಳುತ್ತಿದ್ದಾರೆ. ಅನುಪಮ್ ಖೇರ್ ವಿಡಿಯೋಗೆ ಸುಂದರ ಶೀರ್ಷಿಕೆ ಕೊಟ್ಟಿದ್ದಾರೆ.