ಸಿನಿಮಾ ಯಶಸ್ಸು ವಿಚಾರವಾಗಿ ಕೊಂಚ ಹಿನ್ನೆಡೆ ಕಂಡಿರುವ ಬಾಲಿವುಡ್ ಬೇಡಿಕೆ ನಟ ಅಕ್ಷಯ್ ಕುಮಾರ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ 'OMG 2'. ಆಧ್ಯಾತ್ಮಿಕ ಸಿನಿಮಾವಾದ ಓ ಮೈ ಗಾಡ್ (Oh My God 2) ಚಿತ್ರದ ಮುಂದಿವರಿದ ಭಾಗ. ಈ ಸಿನಿಮಾ ಅಪ್ಡೇಟ್ಸ್ಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಬಾಲಿವುಡ್ ನಟ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಚಿತ್ರ ತಯಾರಕರು ಅಕ್ಷಯ್ ಕುಮಾರ್ ನಾಯಕರಾಗಿರುವ ತಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನು ಅಂತಿಮಗೊಳಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ನಟ ಅಕ್ಷಯ್ ಕುಮಾರ್ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ನಟ "ನಾವು ಬರುತ್ತಿದ್ದೇವೆ, ನೀವೂ ಬನ್ನಿ. ಆಗಸ್ಟ್ 11ಕ್ಕೆ ಚಿತ್ರಮಂದಿರಗಳಲ್ಲಿ OMG2" ಎಂದು ಬರೆದುಕೊಂಡಿದ್ದಾರೆ.
ಕೆಲ ವಾರಗಳ ಹಿಂದೆ, ವೂಟ್ ಮತ್ತು ಜಿಯೋ ಸಿನಿಮಾದಂತಹ ಮುಂಚೂಣಿಯಲ್ಲಿರುವ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಈ OMG2 ಅನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗುತ್ತಿತ್ತು. ಆದರೆ, ಇತ್ತೀಚಿನ ಮಾಹಿತಿ ಪ್ರಕಾರ, ಅಭಿಮಾನಿಗಳು ಅಕ್ಷಯ್ ಅವರ ಸಿನಿಮಾವನ್ನು ದೊಡ್ಡ ಪರದೆಯಲ್ಲೇ ವೀಕ್ಷಿಸಿ ಆನಂದಿಸಬಹುದು. ಒಎಂಜಿ 2 ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ಕೂಡ ನಟಿಸಿದ್ದಾರೆ.
ಅಮಿತ್ ರೈ ನಿರ್ದೇಶನದ ಓಹ್! ಮೈ ಗಾಡ್ 2 ಚಿತ್ರದ ಕಥೆಯು ಭಾರತದ ಶಿಕ್ಷಣ ವ್ಯವಸ್ಥೆ, ವಿಶೇಷವಾಗಿ ಅಡಲ್ಟ್ ಎಜುಕೇಶನ್ ಮೇಲೆ ಕೇಂದ್ರೀಕರಿಸುತ್ತದೆ. ಒಂದು ಮೂಲದ ಪ್ರಕಾರ, ಚಿತ್ರದ ವಿಷಯವು ಬಹಳ ಮಹತ್ವದ್ದಾಗಿದೆ. ಮೊದಲ ಭಾಗ, OMG ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿತು. 2012ರ ಅತ್ಯಂತ ಯಶಸ್ವಿ ಚಲನಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿತು.