ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರದ ಬಗ್ಗೆ ಪ್ರಚಾರ ಪಡೆದುಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರವು ಸಿನಿಮಾ ನಟಿಯರನ್ನು ನೂತನ ಸಂಸತ್ ಭವನ ವೀಕ್ಷಿಸಲು ಆಹ್ವಾನಿಸಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಶರದ್ ಪವಾರ್ ನೇತೃತ್ವದ ಬಣ ಆರೋಪಿಸಿದೆ. ಭಾರತೀಯ ಚಿತ್ರರಂಗದ ನಟಿಯರಾದ ಕಂಗನಾ ರಣಾವತ್, ಇಶಾ ಗುಪ್ತಾ ಮತ್ತು ತಮನ್ನಾ ಭಾಟಿಯಾ ಸೇರಿದಂತೆ ಅನೇಕರು ಹೊಸ ಸಂಸತ್ ಭವನಕ್ಕೆ ಭೇಟಿ ನೀಡಿದ್ದಾರೆ.
"ಸಂಸತ್ ಭವನಕ್ಕೆ ಭೇಟಿ ನೀಡಿರುವ ನಟಿಯರಲ್ಲಿ ಯಾರೊಬ್ಬರಾದರೂ ಮಹಿಳೆಯರ ಮೇಲಾದ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಿದ್ದಾರೆಯೇ? ಮಣಿಪುರ ಅಥವಾ ಭಾರತದ ಇತರೆಡೆಗಳಲ್ಲಿ ಮಹಿಳೆಯರು ಸಂಕಷ್ಟ ಅನುಭವಿಸುತ್ತಿದ್ದಾಗ ಇವರೆಲ್ಲ ಎಲ್ಲಿದ್ದರು? ಎಂದು ಶರದ್ ಪವಾರ್ ಬಣದ ವಕ್ತಾರ ಕ್ಲೈಡ್ ಕ್ತಸ್ಟೊ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಪ್ರಶ್ನಿಸಿದ್ದಾರೆ.
ನೂತನ ಸಂಸತ್ ಭವನಕ್ಕೆ ತಮನ್ನಾ ಭೇಟಿ: ಬಹುಭಾಷಾ ನಟಿ ತಮನ್ನಾ ಭಾಟಿಯಾ ನಿನ್ನೆ (ಗುರುವಾರ) ನೂತನ ಸಂಸತ್ ಭವನಕ್ಕೆ ಭೇಟಿ ನೀಡಿದ್ದರು. ಈ ವೇಳೆ 'ಜೈಲರ್' ನಟಿ ಕೆಂಪು ಸೀರೆಯುಟ್ಟು ಸಾಂಪ್ರದಾಯಿಕ ಲುಕ್ನಲ್ಲಿ ಕಾಣಿಸಿಕೊಂಡರು. ನಟಿ ತಮನ್ನಾ ಭಾಟಿಯಾ ನೂತನ ಸಂಸತ್ ಭವನಕ್ಕೆ ಪ್ರವೇಶಿಸಿದ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಹಿಳಾ ಮೀಸಲಾತಿ ಅಂಗೀಕಾರದ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ತಮನ್ನಾ, "ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರವು ನಮ್ಮ ದೇಶಕ್ಕೆ ಐತಿಹಾಸಿಕ ಸಂದರ್ಭವಾಗಿದೆ. ಈ ಮಸೂದೆ ನಮಗೆ ಪ್ರಮುಖವಾಗಿತ್ತು. ನಾವು ಸೂಪರ್ ಪವರ್ ಆಗಲು ಇದು ಮೊದಲ ಹೆಜ್ಜೆಯಾಗಿದೆ." ಎಂದು ಸಂತಸ ವ್ಯಕ್ತಪಡಿಸಿದರು. ಜೊತೆಗೆ ಕೇಂದ್ರ ಸರ್ಕಾರದ ಈ ನಡೆಯನ್ನು ಶ್ಲಾಘಿಸಿದರು.
ಈ ವೇಳೆ ನಟಿ ದಿವ್ಯಾ ದತ್ತಾ ಮಾತನಾಡಿ, "ನಾವು ನೂತನ ಸಂಸತ್ ಭವನಕ್ಕೆ ಬಂದಿರುವುದು ನಮ್ಮ ಅದೃಷ್ಟ. ಇದೊಂದು ಐತಿಹಾಸಿಕ ದಿನ. ಇದರ ಭಾಗವಾಗಿರುವುದು ನಮಗೆ ಬಹಳ ಸಂತೋಷ. ಎಲ್ಲಾ ಜವಾಬ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡಿದ್ದಾರೆ. ಇದು ನಮಗೆ ಉತ್ತೇಜನ ನೀಡುತ್ತದೆ" ಎಂದು ಹೇಳಿದರು.
"ಇದು ಪ್ರತಿಯೊಬ್ಬ ಮಹಿಳೆಗೆ ಹೆಮ್ಮೆಯ ವಿಷಯ. ನಾನು ಭಾರತೀಯ ಮಹಿಳೆಯಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಭಾರತದಲ್ಲಿ (ನಾಯಕತ್ವ ಸ್ಥಾನಗಳಲ್ಲಿ) 33% ಮಹಿಳೆಯರು ಇದ್ದರೆ, ನಾವು ಜಾಗತಿಕವಾಗಿ ಮುಂದುವರೆಯುತ್ತೇವೆ" ಎಂದು ನಟಿ ಹೃಷಿತಾ ಭಟ್ ಹೇಳಿದರು.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಈ ನಡೆಗೆ ಬಾಲಿವುಡ್ ನಟಿಯರಾದ ಕಂಗನಾ ರಣಾವತ್ ಇಶಾ ಗುಪ್ತಾ ಮತ್ತು ಹೇಮಾ ಮಾಲಿನಿ ಸಂತಸ ವ್ಯಕ್ತಪಡಿಸಿದ್ದರು. ಜೊತೆಗೆ ಇಶಾ ಗುಪ್ತಾ ರಾಜಕೀಯದ ಭಾಗವಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು.
"ಇದೊಂದು ಐತಿಹಾಸಿಕ ದಿನ. ಇದು (ಹೊಸ ಸಂಸತ್ತಿನ ಕಟ್ಟಡ) ಅಮೃತಕಾಲದ ಸಂಕೇತವಾಗಿದೆ. ಈ ಮಹತ್ವದ ದಿನದಂದು ಬಿಜೆಪಿಗೆ ಯಾವುದೇ ವಿಷಯ ಅಥವಾ ಯಾವುದೇ ಮಸೂದೆಯ ಬಗ್ಗೆ ಮಾತನಾಡಬಹುದಿತ್ತು. ಆದರೆ ಅವರು ಮಹಿಳಾ ಸಬಲೀಕರಣವನ್ನು ಆಯ್ಕೆ ಮಾಡಿಕೊಂಡರು. ಇದು ಅವರ ಆಲೋಚನಾ ಶಕ್ತಿ ಮತ್ತು ಮನಸ್ಥಿತಿಯನ್ನು ತೋರಿಸುತ್ತದೆ. ನಮ್ಮ ದೇಶವು ಸಮರ್ಥರ ಕೈಯಲ್ಲಿದೆ. ಪ್ರಧಾನಿ ಮೋದಿಯವರು ಮಹಿಳೆಯರಿಗೆ ಮೊದಲ ಆಧ್ಯತೆ ನೀಡಿದ್ದಾರೆ. ಇದು ನಿಜಕ್ಕೂ ಅದ್ಭುತವಾಗಿದೆ" - ನಟಿಕಂಗನಾ ರಣಾವತ್
"ಹೊಸ ಸಂಸತ್ತಿನ ಮೊದಲ ಅಧಿವೇಶನದಲ್ಲಿ ಪ್ರಧಾನಿ ಮೋದಿ ಅವರು ಈ ವಿಚಾರವನ್ನು ಪ್ರಸ್ತುತಪಡಿಸಿರುವುದು ಒಂದು ಸುಂದರ ವಿಷಯ. ಇದು ಅತ್ಯಂತ ಪ್ರಗತಿಪರ ಚಿಂತನೆಯಾಗಿದೆ. ನನಗೆ ಬಾಲ್ಯದಿಂದಲೂ ರಾಜಕೀಯ ಸೇರಬೇಕೆಂದು ಆಸೆಯಿತ್ತು. ಅದರ ಬಗ್ಗೆ ಯೋಚಿಸಿದ್ದೆ ಕೂಡ. ಈ ಮಸೂದೆ ಅಂಗೀಕಾರವಾದಲ್ಲಿ ನೀವು ನನ್ನನ್ನು 2026 ರಲ್ಲಿ ರಾಜಕೀಯದಲ್ಲಿ ನೋಡುತ್ತೀರಿ" - ನಟಿ ಇಶಾ ಗುಪ್ತಾ
"ಸೆಪ್ಟೆಂಬರ್ 19 ಐತಿಹಾಸಿಕ ದಿನವಾಗಿದೆ. ಹೊಸ ಸಂಸತ್ತಿನ ಮೊದಲ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಪರಿಚಯಿಸಲಾಯಿತು. ಇದನ್ನು ಶೀಘ್ರದಲ್ಲೇ ಅಂಗೀಕರಿಸಲಾಗುವುದು ಎಂದು ನಾನು ಭಾವಿಸುತ್ತೇನೆ. ಪ್ರಸ್ತುತ ನಾವು 81 ಮಹಿಳಾ ಸಂಸದರಿದ್ದೇವೆ. ಈ ಮಸೂದೆಯ ನಂತರ ನಮ್ಮ ಸಂಖ್ಯೆ 181 ಆಗಲಿದೆ. ಹಾಗಾಗಿ ಮಹಿಳಾ ಪ್ರಾತಿನಿಧ್ಯ ಹೆಚ್ಚಲಿದೆ. ಮಹಿಳೆಯರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರು ಮುಂದೆ ಬರಬೇಕು. ನಿಮಗೆ ಹಾರಲು ಆಕಾಶ ತೆರೆದಿದೆ" - ನಟಿ ಹೇಮಾ ಮಾಲಿನಿ
ಇದನ್ನೂ ಓದಿ:ಸಂಸತ್ತಿನಲ್ಲಿ ಮೀಸಲಾತಿ ಮಸೂದೆ ಪಾಸ್: ಮಹಿಳಾ ಸಂಸದರಿಂದ ಪ್ರಧಾನಿ ಮೋದಿಗೆ ಜೈಕಾರ