ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ನಟನೆಯ ಮುಂಬರುವ ಪ್ರೊಜೆಕ್ಟ್ 'ತಾಲಿ'. ಸೀರಿಸ್ನಲ್ಲಿ ಬಾಲಿವುಡ್ ನಟಿ ತೃತೀಯಲಿಂಗಿ ಪಾತ್ರದಲ್ಲಿ ನಟಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ ಸುಶ್ಮಿತಾ ಸೇನ್ ಅವರು ಟ್ರಾನ್ಸ್ಜೆಂಡರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಾಲಿ ಸರಣಿ ತೃತೀಯಲಿಂಗಿ ಕಾರ್ಯಕರ್ತೆ ಶ್ರೀ ಗೌರಿ ಸಾವಂತ್ ಅವರ ಜೀವನಾಧಾರಿತ ಕಥೆಯಾಗಿದೆ. ತೆರೆ ಮೇಲೆ ಶ್ರೀ ಗೌರಿ ಸಾವಂತ್ ಆಗಿ ಸುಶ್ಮಿತಾ ಅವರು ದರ್ಶನ ಕೊಡಲಿದ್ದು, ಸಿನಿಮಾ ಪ್ರಚಾರ ಭಾಗವಾಗಿ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ತಾಲಿ ಪ್ರಮೋಶನ್ ಸಂದರ್ಶನವೊಂದರಲ್ಲಿ ನಟಿ ವೈಯಕ್ತಿಕ ಜೀವನ ವಿಚಾರವಾಗಿ ಟೀಕಿಸಿದವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಲಂಡನ್ನಿಂದ ಸುಶ್ಮಿತಾ ಅವರೊಂದಿಗೆ ಕ್ಲಿಕ್ಕಿಸಿದ್ದ ಫೋಟೋಗಳನ್ನು ಹಂಚಿಕೊಂಡಿದ್ದರು. ಆ ವೇಳೆ ಸುಶ್ಮಿತಾ ಅವರು ಸಖತ್ ಸುದ್ದಿಯಾದರು. ಅಲ್ಲದೇ ಆ ಸಮಯದಲ್ಲಿ ಸುಶ್ಮಿತಾ ಅವರ ಹೆಸರು ಮಾಡೆಲ್ ರೋಹ್ಮನ್ ಶಾಲ್ ಜೊತೆ ಕೇಳಿ ಬರುತ್ತಿತ್ತು. ಆ ಸಂದರ್ಭ ಲಲಿತ್ ಮೋದಿ ಜೊತೆ ಸುಶ್ಮಿತಾ ಅವರ ರೊಮ್ಯಾಂಟಿಕ್ ಫೋಟೋಗಳನ್ನು ಕಂಡ ನೆಟ್ಟಿಗರು ನಟಿ ವಿರುದ್ಧ ಕಿಡಿಕಾರಿದ್ದರು. ಸುಶ್ಮಿತಾ ಸೇನ್ ಅವರನ್ನು 'gold digger' ಎಂದು ಟೀಕಿಸಲಾಯಿತು. ಆ ವೇಳೆ ಮಾಜಿ ವಿಶ್ವಸುಂದರಿ ಕೂಡ ಸುಧೀರ್ಘ ಬರಹದೊಂದಿಗೆ ನೆಟ್ಟಿಗರಿಗೆ ಪ್ರತ್ಯುತ್ತರ ಕೊಟ್ಟಿದ್ದರು.
ಇದೀಗ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ನಟಿ, ಅವಮಾನ ಅಥವಾ ನೆಗೆಟಿವ್ ಕಾಮೆಂಟ್ಸ್ ನನ್ನ ಮೇಲೆ ಪರಿಣಾಮ ಬೀರಲು ನಾನು ಬಿಡುವುದಿಲ್ಲ. ಆತ್ಮವಿಶ್ವಾಸದ ಶಕ್ತಿಯನ್ನು ನಂಬುವ ನಾನು ನನ್ನ ಮೌಲ್ಯವನ್ನು ಇತರರ ಅಭಿಪ್ರಾಯಗಳಿಂದ ವ್ಯಾಖ್ಯಾನಿಸಲು ನಾನು ಬಿಡುವುದಿಲ್ಲ. ಈ ಮನಸ್ಥಿತಿ ತನ್ನನ್ನು ನೋಯಿಸುವ ಟೀಕೆಗಳಿಂದ ಪ್ರಭಾವಿತಳಾಗದಂತೆ ನೋಡಿಕೊಳ್ಳುತ್ತದೆ. ತನ್ನ ಜೀವನದಲ್ಲಿ ಅಪ್ರಸ್ತುತವಲ್ಲದ್ದನ್ನು ತಳ್ಳಿಹಾಕಲು ಅನುವು ಮಾಡಿಕೊಡುತ್ತದೆ. ಅವಮಾನವನ್ನು ಸ್ವೀಕರಿಸಿದರೆ ಮಾತ್ರ ಅದು ಅವಮಾನ. ಅಂತಹ ನೆಗೆಟಿವ್ ಕಾಮೆಂಟ್ಗಳನ್ನು ನಾನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.