ಮೀ ಟೂ ಅಭಿಯಾನದಲ್ಲಿ ಸದ್ದಾಗಿದ್ದ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಸಾಜಿದ್ ಖಾನ್ ಈಗ ಹಿಂದಿ ಬಿಗ್ ಬಾಸ್ 16ರ ಸ್ಪರ್ಧಿ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಶೋನಲ್ಲಿ ಸಾಜಿದ್ ಖಾನ್ ಭಾಗಿಯಾಗುತ್ತಾರೆಂದು ಕೇಳಿ ಬಂದಾಗಿನಿಂದಲೂ ವಿರೋಧ ವ್ಯಕ್ತವಾಗಿತ್ತು. ಬಿಗ್ ಬಾಸ್ ಎಂಟ್ರಿ ಆದ ಮೇಲೊಂತೂ ಬಿಗ್ ಬಾಸ್ ತಯಾರಕರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಜಿದ್ ಖಾನ್ ಅವರನ್ನು ಮನೆಯಿಂದ ಹೊರ ಹಾಕುವಂತೆ ಒತ್ತಾಯ ಹೇರಲಾಗುತ್ತಿದೆ. ಇದೀಗ ನಟಿ ಶೆರ್ಲಿನ್ ಚೋಪ್ರಾ ಧ್ವನಿ ಎತ್ತಿದ್ದಾರೆ.
ಮೀ ಟೂ ಅಭಿಯಾನದಲ್ಲಿ ನಿರ್ದೇಶಕ ಮತ್ತು ಬಿಗ್ಬಾಸ್ ಸ್ಪರ್ಧಿ ಸಾಜಿದ್ ಖಾನ್ ವಿರುದ್ಧ ಹತ್ತು ಮಹಿಳೆಯರು ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡಿದ್ದರು. ಇದೀಗ ಇವರನ್ನು ಬಿಗ್ ಬಾಸ್ ಮನೆಯಲ್ಲಿರಿಸಿರುವುದು ಕೋಲಾಹಲವನ್ನು ಉಂಟುಮಾಡಿದೆ. ಈ ಬಗ್ಗೆ ನಟಿ ಶೆರ್ಲಿನ್ ಚೋಪ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಜಿದ್ ಖಾನ್ರನ್ನು ಏಕೆ ಮನೆಯಲ್ಲಿಟ್ಟಿದ್ದೀರಿ ಎಂದು ನಿರೂಪಕ ಸಲ್ಮಾನ್ ಖಾನ್ಗೆ ಪ್ರಶ್ನೆ ಮಾಡಿದ್ದಾರೆ.