ತಾನು ಮಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಟಾಲಿವುಡ್ ನಟಿ ಸಮಂತಾ ರುತ್ ಫ್ರಭು ಕೆಲ ದಿನಗಳ ಹಿಂದೆ ಹೇಳಿಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ಗಳು ಬಂದ ಹಿನ್ನೆಲೆ ಇತ್ತೀಚೆಗಷ್ಟೇ ಸಮಂತಾ ಈ ಬಗ್ಗೆ ಮೌನ ಮುರಿದಿದ್ದರು. ಆದರೆ ಸಮಂತಾ ಅನಾರೋಗ್ಯದ ಸುದ್ದಿ ಮತ್ತೆ ಸದ್ದು ಮಾಡುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಸ್ಟಾರ್ ಹೀರೋಯಿನ್ ಸಮಂತಾ ಅನಾರೋಗ್ಯ ಬಗ್ಗೆ ಕುರಿತು ಊಹಾಪೋಹಗಳು ಹರಿದಾಡುತ್ತಿವೆ. ಬುಧವಾರದಂದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣ ಸೇರಿದಂತೆ ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಇದೆಲ್ಲಾ ಕೇವಲ ವದಂತಿ ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ. ನಟಿ ಮನೆಯಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಸಮಂತಾರ ಮ್ಯಾನೇಜರ್ ಸ್ಯಾಮ್ ಆರೋಗ್ಯದ ಬಗ್ಗೆ ಬರುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಕೇಳಿಕೊಂಡಿದ್ದಾರೆ.
ಸ್ಯಾಮ್ ಅನಾರೋಗ್ಯದಿಂದ ಬಳಲುತ್ತಿದ್ದರೂ ಯಶೋದಾ ಸಿನಿಮಾಗಾಗಿ ಸಾಕಷ್ಟು ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಚಿತ್ರವು ನವೆಂಬರ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಉತ್ತಮ ಯಶಸ್ಸನ್ನು ಪಡೆದಿದೆ. ಶ್ರೀದೇವಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಖ್ಯಾತ ನಿರ್ಮಾಪಕ ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಿಸಿರುವ ಈ ಚಿತ್ರವನ್ನು ಹರಿ ಮತ್ತು ಹರೀಶ್ ನಿರ್ದೇಶಿಸಿದ್ದಾರೆ.