ಮೋಹಕ ತಾರೆ ರಮ್ಯಾ ಕನ್ನಡ ಸಿನಿಮಾ ಇಂಡಸ್ಟ್ರಿಗೆ ನಿರ್ಮಾಪಕಿಯಾಗಿ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಜೊತೆಗೆ ಮೊದಲಿನಂತೆ ಕನ್ನಡ ಸಿನಿಮಾಗಳಿಗೆ, ಯುವ ಪ್ರತಿಭೆಗಳಿಗೆ ಸಪೋರ್ಟ್ ಮಾಡ್ತಿದ್ದಾರೆ. ಇದೀಗ ಪ್ರವೀಣ್ ತೇಜ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀಮಹಾದೇವ್, ಭಾವನಾ ರಾವ್, ನವೀನ್ ಶಂಕರ್, ಅರ್ಚನಾ ಜೋಯಿಸ್ ನಟಿಸಿರುವ ಹೊಂದಿಸಿ ಬರೆಯಿರಿ ಸಿನಿಮಾಗೆ ನಟಿ ರಮ್ಯಾ ಬೆಂಬಲ ಸೂಚಿಸಿದ್ದಾರೆ. ನಾಳೆ ಬೆಳಗ್ಗೆ 11.31ಕ್ಕೆ ಸಂಡೇ ಸಿನಿಮಾಸ್ ಯೂಟ್ಯೂಬ್ನಲ್ಲಿ ಹೊಂದಿಸಿ ಬರೆಯಿರಿ ಸಿನಿಮಾದ ಓ ಕವನ ಎಂಬ ವಿಡಿಯೋ ಸಾಂಗ್ ಅನ್ನು ರಿಲೀಸ್ ಮಾಡಲಿದ್ದಾರೆ.
ರಾಮೇನಹಳ್ಳಿ ಜಗನ್ನಾಥ್ ಸಾರಥ್ಯದಲ್ಲಿ ತಯಾರಾಗಿರುವ ಹೊಂದಿಸಿ ಬರೆಯಿರಿ ಸಿನಿಮಾ ಇದೀಗ ಪ್ರೇಕ್ಷಕರ ಕುತೂಹಲದ ಕೇಂದ್ರ ಬಿಂದುವಾಗಿದೆ. ಕಥೆ, ಪಾತ್ರವರ್ಗದ ಬಗ್ಗೆ ಪ್ರೇಕ್ಷಕರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಫಸ್ಟ್ ಲುಕ್ನಿಂದ ಹಿಡಿದು ಈವರೆಗೂ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ಆವರಿಸಿರುವ ಹೊಂದಿಸಿ ಬರೆಯಿರಿ ಸಿನಿಮಾ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.
ನಮ್ಮ ಬದುಕಿನಲ್ಲಿ ಏನೇ ಆದರೂ, ಅದಕ್ಕೆ ನಾವೇ ಹೊಣೆ. ಆಗಿರುವ ವಿಷಯಗಳನ್ನು ಹೊಂದಿಸಿ ಬರೆದುಕೊಂಡು ಜೀವನ ಸಾಗಿಸಬೇಕು ಎನ್ನುವ ಸಂದೇಶವನ್ನು ಇಟ್ಟುಕೊಂಡು ಸಿನಿಮಾವನ್ನು ರೂಪಿಸಲಾಗಿದ್ದು, ಏಳು ಯುವಕ-ಯುವತಿಯರ ಒಂದೊಂದು ಕಥೆಯೂ ಚಿತ್ರದಲ್ಲಿದೆ. ಸುನೀಲ್ ಪುರಾಣಿಕ್, ಪ್ರವೀಣ್ ಡಿ. ರಾವ್, ಧರ್ಮೇಂದ್ರ ಅರಸ್, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಹಿರಿಯ ಕಲಾವಿದರ ದಂಡು ಸಹ ಚಿತ್ರದಲ್ಲಿದೆ.
ಇದನ್ನೂ ಓದಿ:ಆಸ್ಕರ್ ಅವಾರ್ಡ್ 2022.. ನಿರ್ದೇಶಕ ಪವನ್ ಒಡೆಯರ್ಗೆ ಜ್ಯೂರಿ ಸ್ಥಾನ
ಜೋ ಕೋಸ್ಟ್ ಸಂಗೀತ, ಕೆ. ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಗುಳ್ಟು ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಶಾಂತಿ ಸಾಗರ್ ಈ ಚಿತ್ರಕ್ಕೆ ಕ್ಯಾಮರಾ ಹಿಡಿದಿದ್ದಾರೆ. ಟಗರು ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, "ಸಂಡೇ ಸಿನಿಮಾಸ್ "ಬ್ಯಾನರ್ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಅವರ ಸ್ನೇಹಿತರು ನಿರ್ಮಾಣ ಮಾಡಿದ್ದಾರೆ. ನವೆಂಬರ್ 18ಕ್ಕೆ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.