ಬಾಲಿವುಡ್‌ನ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ತಾರೆ. ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ರೊಂದಿಗೆ ಕಳೆದ ಕ್ಷಣಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಆದರೂ ಪ್ರಿಯಾಂಕಾ ಇನ್ನೂ ಮಗಳ ಮುಖವನ್ನು ಅಭಿಮಾನಿಗಳಿಗೆ ಸಂಪೂರ್ಣವಾಗಿ ತೋರಿಸಿಲ್ಲ.
ಇದೀಗ ವಿಶ್ವ ಪುತ್ರಿಯರ ದಿನದ (ಭಾನುವಾರ) ಅಂಗವಾಗಿ ಮಗಳು ಮಾಲ್ತಿ ಮತ್ತು ತಂದೆ ಅಶೋಕ್ ಚೋಪ್ರಾ ಅವರೊಂದಿಗಿನ ಚಿತ್ರಗಳನ್ನು ಒಂದು ದಿನ ತಡವಾಗಿ (ಸೋಮವಾರ) ಶೇರ್ ಮಾಡಿದ್ದಾರೆ.
2013ರಲ್ಲಿ ಪ್ರಿಯಾಂಕಾ ತನ್ನ ತಂದೆ ಅಶೋಕ್ ಚೋಪ್ರಾ ಅವರನ್ನು ಕಳೆದುಕೊಂಡಿದ್ದರು. ಅವರ ಸಾವಿನ ನಂತರ ಪ್ರಿಯಾಂಕಾ ಆಗಾಗ್ಗೆ ತನ್ನ ತಂದೆಯೊಂದಿಗೆ ಕಳೆದ ನೆನಪುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಪ್ರಿಯಾಂಕಾ ಚೋಪ್ರಾ ಅವರಿಗೆ ಈ ವರ್ಷದ ಡಾಟರ್ಸ್ ಡೇ ವಿಶೇಷ. ಏಕೆಂದರೆ ಅವರೀಗ ಒಬ್ಬ ತಾಯಿ. ಈ ಕ್ಷಣದಲ್ಲಿ ತಾಯಿಯಾಗಿ ಮಗಳೊಂದಿಗಿನ ಫೋಟೋ, ಓರ್ವ ಮಗಳಾಗಿ ತಂದೆಯೊಂದಿಗಿನ ಫೋಟೋ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಗಳಿಸಿದೆ.