ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಮಾಧುರಿ ದೀಕ್ಷಿತ್ 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಿವೆ. ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವದಂತಿಗಳಿವೆ. ಈ ಮಧ್ಯೆ ಮಹಾರಾಷ್ಟ್ರದ ಮುಂಬೈ ಲೋಕಸಭಾ ಕ್ಷೇತ್ರದಲ್ಲಿ ಮಾಧುರಿ ದೀಕ್ಷಿತ್ ಅವರ ಬ್ಯಾನರ್ಗಳನ್ನು ಹಾಕಲಾಗಿದೆ. ಈ ಮೂಲಕ ನಟಿ ಬಿಜೆಪಿಯ ಹಾಲಿ ಸಂಸದೆ ಪೂನಂ ಮಹಾಜನ್ ಅವರ ಸ್ಥಾನದಲ್ಲಿ ಚುನಾವಣೆಗೆ ಸ್ಪರ್ಧಿಸುವ ಸೂಚನೆಗಳಿವೆ.
ಮಾಧುರಿ ದೀಕ್ಷಿತ್ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಲೇ ಇದೆ. ಈ ವದಂತಿಗಳಿಗೆ ಪುಷ್ಠಿ ನೀಡುವಂತೆ ನಟಿ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಂಬೈನಲ್ಲಿರುವ ಮಾಧುರಿ ದೀಕ್ಷಿತ್ ಮನೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಶಾ ಅವರು ನಟಿಗೆ ಮೋದಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಕಿರುಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದರು. ಇದರ ನಂತರವೇ ಮಾಧುರಿ ದೀಕ್ಷಿತ್ ಬಿಜೆಪಿ ಸೇರುವ ಮಾತುಕತೆಗೆ ಮತ್ತಷ್ಟು ಬಲ ಬಂದಿದೆ. ಹಾಗಾಗಿ ಅವರು ಚುನಾವಣಾ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ. ಇದುವರೆಗೂ ಮಾಧುರಿ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಉತ್ತರ - ಮಧ್ಯ ಮುಂಬೈ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ನಾಯಕ ದಿವಂಗತ ಪ್ರಮೋದ್ ಮಹಾಜನ್ ಅವರ ಪುತ್ರಿ ಪೂನಂ ಮಹಾಜನ್ ಅವರ ಆಡಳಿತವಿದೆ. ಇವರು ಈ ಕ್ಷೇತ್ರದಿಂದ 2014 ಮತ್ತು 2019ರಲ್ಲಿ ಸತತ ಎರಡು ಬಾರಿ ಗೆದ್ದಿದ್ದಾರೆ. ಸದ್ಯ ಸಾಯಿ ಉತ್ಸವದ ನಿಮಿತ್ತ ಈ ಕ್ಷೇತ್ರದ ಎಲ್ಲಾ ಕಡೆ ನಟಿ ಮಾಧುರಿ ದೀಕ್ಷಿತ್ ಅವರ ಬ್ಯಾನರ್ಗಳನ್ನು ಹಾಕಲಾಗಿದೆ. ಇದರಲ್ಲಿ ಗಮನಾರ್ಹ ವಿಚಾರ ಎಂದರೆ, ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾಧುರಿ ದೀಕ್ಷಿತ್ ಅವರ ಬ್ಯಾನರ್ ಅಥವಾ ಫ್ಲೆಕ್ಸ್ಗಳನ್ನು ಸಾರ್ವಜನಿಕವಾಗಿ ಹಾಕಿರುವುದು.