ವಜ್ರಕಾಯ, ಕಿರುಗೂರಿನ ಗಯ್ಯಾಳಿಗಳು, ಪೆಟ್ರೋಮ್ಯಾಕ್ಸ್ ಚಿತ್ರಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಹೊಂದಿರುವ ನಟಿ ಕಾರುಣ್ಯ ರಾಮ್. ಅಭಿನಯದ ಜೊತೆಗೆ ತಮ್ಮದೇ ಆದ 'ಸಂಸ್ಕಾರ ಟ್ರಸ್ಟ್' ವತಿಯಿಂದ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಇದೀಗ ನಟಿ ಕಾರುಣ್ಯ ರಾಮ್ ತಮ್ಮ ರಾಜರಾಜೇಶ್ವರಿ ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಹೌದು, ಬುಧವಾರ ರಾತ್ರಿ ಹನ್ನೊಂದು ಗಂಟೆ ಹೊತ್ತಲ್ಲಿ ತಮ್ಮ ಸ್ನೇಹಿತರು ಮತ್ತು ಸಹೋದರಿಯ ಜೊತೆ ರಸ್ತೆಗಳಿದ ಕಾರುಣ್ಯ ರಾಮ್ ಹತ್ತಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಕಾರುಣ್ಯ ರಾಮ್, ಎರಡು ಘಟನೆಗಳಿಂದಾಗಿ ನಾನು ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚವ ಕೆಲಸ ಮಾಡಬೇಕು ಎನಿಸಿತ್ತು. ಏಕೆಂದರೆ, ನನ್ನ ಸ್ನೇಹಿತರೊಬ್ಬರ ತಂದೆ ತಾಯಿ ವಾಹನ ಓಡಿಸುವಾಗ ರಸ್ತೆ ಗುಂಡಿಯಿಂದಾಗಿ ಬಿದ್ದು ಆಸ್ಪತ್ರೆ ಸೇರಿದ್ದರು. ಅದರಲ್ಲಿ ಓರ್ವರು ಪ್ರಾಣವನ್ನೇ ಕಳೆದುಕೊಂಡರು. ಹಣಕ್ಕಿಂತಲೂ ಜೀವ ಅಮೂಲ್ಯ. ಈ ರೀತಿಯಲ್ಲಿ ಬೇರೆಯವರ ಜೀವ ಬಲಿಯಾಗಬಾರದು ಎನ್ನುವ ಕಾರಣಕ್ಕೆ ನಾನು ಮತ್ತು ಸ್ನೇಹಿತರು ಜೊತೆಗೂಡಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುತ್ತಿದ್ದೇವೆ ಎಂದು ತಿಳಿಸಿದರು.
ವಾಹನ ಸವಾರರದಿಂದ ಅಭಿನಂದನೆ.. ರಾತ್ರಿ 11 ಗಂಟೆಯ ಹೊತ್ತಿಗೆ ರಸ್ತೆ ಗುಂಡಿಗಳನ್ನು ಮುಚ್ಚಲು ಶುರು ಮಾಡಿದ ಕಾರುಣ್ಯ ಮತ್ತು ಅವರ ತಂಡಕ್ಕೆ ಆ ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಅಭಿನಂದನೆ ಸಲ್ಲಿಸಿದರು. ಆ ರಸ್ತೆಯಲ್ಲಿ ಹೋಗುತ್ತಿದ್ದವರು ವಾಹನ ನಿಲ್ಲಿಸಿ, ಉತ್ತಮ ಕೆಲಸ ಮಾಡುತ್ತಿದ್ದೀರಿ ಎಂದು ಬೆನ್ನು ತಟ್ಟಿದರು. ಜೊತೆಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.