ಮಲಯಾಳಂನ ಖ್ಯಾತ ನಿರ್ಮಾಪಕ, ಎಐಸಿಸಿ ಸದಸ್ಯ ಮತ್ತು ಉದ್ಯಮಿ ಪಿ.ವಿ ಗಂಗಾಧರನ್ ನಿಧನದ ಬೆನ್ನಲ್ಲೇ ಚಿತ್ರರಂಗದಿಂದ ಮತ್ತೊಂದು ಆಘಾತದ ಸುದ್ದಿ ಬಂದಿದೆ. ಅನುಭವಿ ನಟಿ ಭೈರವಿ ವೈದ್ಯ (Bhairavi Vaidya) ಅವರು ಇಂದು ನಿಧನರಾಗಿದ್ದಾರೆ. ನಟಿಗೆ 67 ವರ್ಷ ವಯಸ್ಸಾಗಿತ್ತು. ಕಳೆದ ಆರು ತಿಂಗಳಿನಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಹಿರಿಯ ನಟಿ 45 ವರ್ಷಗಳಿಗೂ ಹೆಚ್ಚು ಕಾಲದಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ಹಲವು ಸಿನಿಮಾ ಮತ್ತು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ
ನಟಿ ಭೈರವಿ ವೈದ್ಯ ಅವರು ಐಶ್ವರ್ಯಾ ರೈ ಅಭಿನಯದ ತಾಲ್ ಮತ್ತು ಸಲ್ಮಾನ್ ಖಾನ್ - ರಾಣಿ ಮುಖರ್ಜಿ ಜೋಡಿಯ ಚೋರಿ ಚೋರಿ ಚುಪ್ಕೆ ಚುಪ್ಕೆ ಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಪುತ್ರಿ ಜಾನಕಿ ವೈದ್ಯ ಅವರು ತಾಯಿಯ ನಿಧನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಪುತ್ರಿ ಜಾನಕಿ ವೈದ್ಯ ಹೃದಯಸ್ಪರ್ಶಿ ಬರಹ: ಜಾನಕಿ ವೈದ್ಯ ಹಂಚಿಕೊಂಡಿರುವ ಹೃದಯಸ್ಪರ್ಶಿ ಬರಹದಲ್ಲಿ, "ನನಗೆ ನೀವು ನನ್ನ ಮಾ, ಮಾಮ್, ಮಮ್ಮಿ, ಚೋಟಿ, ಭೈರವಿ ಎಲ್ಲವೂ ಆಗಿದ್ದಿರಿ. ವರ್ಣರಂಜಿತ, ನಿರ್ಭೀತ, ಸೃಜನಶೀಲ, ಕಾಳಜಿಯುಳ್ಳ, ಜವಾಬ್ದಾರಿಯುತ ವ್ಯಕ್ತಿಯಾಗಿದ್ದಿರಿ. ನಿಮ್ಮ ಜೀವನದಲ್ಲಿ ಹೆಂಡತಿ, ಪೋಷಕಿ ಜವಾಬ್ದಾರಿಗಳಿಗೂ ಮೊದಲ ಸ್ಥಾನ 'ನಟಿ'ಗೆ ಕೊಟ್ಟಿದ್ದಿರಿ. ತಮ್ಮ ಮಕ್ಕಳನ್ನು ಬೆಳೆಸಿದ ಮತ್ತು ಅವರ ಕನಸನ್ನು ನನಸು ಮಾಡಿಕೊಳ್ಳುವಷ್ಟು ಸಾಮರ್ಥ್ಯರನ್ನಾಗಿ ಮಾಡಿದ ಮಹಿಳೆ. ಚಲನಚಿತ್ರ, ಟಿವಿ, ಒಟಿಟಿ ಯಾವುದೇ ಆಗಿರಲಿ, ಉದ್ಯಮದಲ್ಲಿ ತನ್ನ ಹೆಸರನ್ನು ಪ್ರಜ್ವಲಿಸಿಕೊಂಡ ಮಹಿಳೆ. ಮುಗುಳ್ನಕ್ಕರು, ನಗು ಬೀರಿದರು. ಕೊನೆಯ ಉಸಿರು ಇರುವವರೆಗೂ ಹೋರಾಡಿದ ಮಹಿಳೆ, ನಿಮಗೆ ನನ್ನ ಪ್ರಣಾಮಗಳು. ಈ ಜನ್ಮದಲ್ಲಿ ನಿಮ್ಮನ್ನು ನನ್ನ ತಾಯಿಯಾಗಿ ಪಡೆದ ನಾನು ಧನ್ಯಳು. ಹೇಳಲು ಬಹಳಷ್ಟಿದೆ. ಆದ್ರೆ ಉಸಿರುಗಟ್ಟುವ ವಾತಾವರಣ. ನೀವು ನಮ್ಮನ್ನು ಬಿಟ್ಟು ಬಹಳ ಬೇಗ ನಿರ್ಗಮಿಸಿದಿರಿ. ಆದರೆ ಆ ನಿರ್ದಿಷ್ಟ (ಕಠಿಣ, ಕೊನೆಯ) ಪರಿಸ್ಥಿತಿಯಲ್ಲಿ ನೀವು ನಿಮ್ಮನ್ನು ನೋಡಲು ಬಯಸುವುದಿಲ್ಲ ಎಂಬುದು ಕೂಡ ನನಗೆ ತಿಳಿದಿದೆ. ಅಮ್ಮ ಎಲ್ಲೇ ಇದ್ದರೂ ಶಾಂತಿಯಿಂದಿರಿ. ನಾನು ಒಳ್ಳೆಯ ಮಗಳಾಗುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಅಲ್ಲಿ ನೀವು ನಿಮ್ಮನ್ನು ನೋಡಿಕೊಳ್ಳಿ, ಉಳಿದದ್ದನ್ನು ನಾನು ಮಾಡುತ್ತೇನೆ'' ಎಂದು ಬರೆದುಕೊಂಡಿದ್ದಾರೆ..