2023 ಕನ್ನಡ ಚಿತ್ರರಂಗಕ್ಕೆ ಅಷ್ಟೇನು ಲಕ್ಕಿ ವರ್ಷ ಅಲ್ಲ ಎನ್ನಬಹುದು. ಯಾಕೆಂದರೆ ಈ ವಸಂತದಲ್ಲಿ ಸಂತೋಷಕ್ಕಿಂತ ನೋವಿನ ಸಂಗತಿಗಳೇ ಹೆಚ್ಚು ಉಂಟಾಗಿವೆ. ಸ್ಯಾಂಡಲ್ವುಡ್ ಈ ವರ್ಷ ಖ್ಯಾತ ಕಲಾವಿದರನ್ನು ಕಳೆದುಕೊಂಡಿದೆ. ಹೆಸರಾಂತ ನಟರು, ನಟಿಯರು, ನಿರ್ಮಾಪಕರು ಇಹಲೋಕ ತ್ಯಜಿಸಿದ್ದಾರೆ. ಮೊನ್ನೆಯಷ್ಟೇ, ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಲೀಲಾವತಿ ಅವರು ನಿಧನರಾಗಿದ್ದಾರೆ. ಈ ವರ್ಷದ ಪ್ರಾರಂಭದಿಂದ ಹಿಡಿದು ಕೊನೆಯವರೆಗೂ ಇಂತಹ ಸಾವಿನ ಸುದ್ದಿಗಳು ನೋವುಂಟು ಮಾಡಿದೆ.
ಸುಮಾರು ನಾಲ್ಕೂವರೆ ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ಕನ್ನಡದ 'ಕುಲವಧು' ಡಾ.ಲೀಲಾವತಿ ಇದೇ ಡಿಸೆಂಬರ್ 8ರಂದು ವಯೋಸಹಜ ಕಾಯಿಲೆಯಿಂದ ನಿಧನರಾದರು. ಇವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಲೀಲಾವತಿ ಅವರು ದೊಡ್ಡ ಸ್ಟಾರ್ ನಟಿಯಾಗಿದ್ದರೂ ಕೂಡ ಸರಳ ಜೀವನ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದರು.
ಇನ್ನು ಹೊಸ ವರ್ಷದ ಆರಂಭದಲ್ಲೇ ನಿಧನ ಹೊಂದಿದ್ದ ನಟ ಅಂದ್ರೆ ಲಕ್ಷ್ಮಣ್. ಜನವರಿ 22ರಂದು ಹೃದಯಾಘಾತದಿಂದ ಹಿರಿಯ ನಟ ಲಕ್ಷ್ಮಣ್ ಕೊನೆಯುಸಿರೆಳೆದಿದ್ದರು. ಡಾ ರಾಜ್ ಕುಮಾರ್, ಶಂಕರ್ ನಾಗ್, ಪ್ರಭಾಕರ್, ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ರವಿಚಂದ್ರನ್ ಸೇರಿದಂತೆ ಕನ್ನಡದ ಬಹುತೇಕ ನಟರ ಸಿನಿಮಾಗಳಲ್ಲಿ ಲಕ್ಷ್ಮಣ್ ಖಳ ನಟ ಹಾಗೂ ಪೋಷಕ ಪಾತ್ರಗಳನ್ನು ಮಾಡಿದ್ದರು. ಹೀಗೆ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಲಕ್ಷ್ಮಣ್ ಅಭಿನಯಿಸಿದ್ದಾರೆ. ಇವರಿಗೆ 74 ವರ್ಷ ವಯಸ್ಸಾಗಿತ್ತು.
'ಹಲೋ ಡ್ಯಾಡಿ' ಸಿನಿಮಾ ಖ್ಯಾತಿಯ ನಿತಿನ್ ಗೋಪಿ ಕೂಡ ಜೂನ್ 2ರಂದು ಇಹಲೋಕ ತ್ಯಜಿಸಿದರು. 39ನೇ ವಯಸ್ಸಿನವರಾಗಿದ್ದ ನಿತಿನ್ ಹೃದಯಾಘಾತದಿಂದ ನಿಧನ ಹೊಂದಿದರು. ಇವರು ಪ್ರಖ್ಯಾತ ಕೊಳಲು ವಾದಕ ಗೋಪಿ ಅವರ ಪುತ್ರ. ಡಾ.ವಿಷ್ಣುವರ್ಧನ್ ಜೊತೆ ಹಲೋ ಡ್ಯಾಡಿ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. 39ನೇ ವಯಸ್ಸಿಗೆ ವಿಧಿವಶರಾದ ನಟ ನಿತಿನ್ ಗೋಪಿ ಸಾವಿಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿತ್ತು.
'ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ..' ಹಾಡು ಬರೆದಿದ್ದ ಹಿರಿಯ ನಿರ್ಮಾಪಕ, ನಿರ್ದೇಶಕ ಸಿ.ವಿ ಶಿವಶಂಕರ್ ಜೂನ್ 27ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಅವರು ನಟ, ನಿರ್ದೇಶಕ, ನಿರ್ಮಾಪಕ ಮತ್ತು ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದರು. ಸಿ.ವಿ ಶಿವಶಂಕರ್ ಸ್ಕೂಲ್ ಮಾಸ್ಟರ್, ಕೃಷ್ಣ ಗಾರುಡಿ, ರತ್ನಮಂಜರಿ, ರತ್ನಗಿರಿ ರಹಸ್ಯ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ಪದವೀಧರ, ನಮ್ಮ ಊರು, ಮಹಡಿಯ ಮನೆ, ಹೊಯ್ಸಳ, ಮಹಾ ತಪಸ್ವಿ, ಕನ್ನಡ ಕುವರ, ವೀರ ಮಹಾದೇವ ಸೇರಿದಂತೆ ಹಲವು ಚಿತ್ರಗಳನ್ನು ಶಿವಶಂಕರ್ ನಿರ್ದೇಶನ ಮಾಡಿದ್ದರು.