ಬೆಂಗಳೂರು: ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಅವರೊಂದಿಗೆ ನಿಶ್ಚಿತಾರ್ಥ ಮುರಿದು ಬೀಳುತ್ತಿದ್ದಂತೆ ತಮ್ಮ ತೇಜೋವಧೆಗೆ ಕಾರಣರಾದವರ ವಿರುದ್ಧ ನಟ, ಉದ್ಯಮಿ ವಿದ್ಯಾಭರಣ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಸನ್ನಿಧಿ ಖ್ಯಾತಿಯ ನಟಿ ವೈಷ್ಣವಿ ಅವರೊಂದಿಗೆ ವಿದ್ಯಾಭರಣ್ ನಿಶ್ಚಿತಾರ್ಥಕ್ಕೂ ಮುನ್ನದ ಶಾಸ್ತ್ರಗಳನ್ನು ಮಾಡಿಕೊಂಡಿದ್ದರು. ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿದ್ಯಾಭರಣ್ ಕುರಿತಂತೆ ಅಪಸ್ವರ ಕೇಳಿ ಬಂದಿತ್ತು.
ಯುವತಿಯರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನುವ ರೀತಿ ಯುವತಿಯರಿಬ್ಬರು ಮಾತನಾಡಿದ್ದು, ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಬಳಿಕ ನಟಿ ವೈಷ್ಣವಿ ತಮ್ಮ ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಕೊಂಡಿದ್ದರು. ಆಡಿಯೋ ವೈರಲ್ ಹಿನ್ನೆಲೆ ತಮ್ಮ ಚಾರಿತ್ರ್ಯವಧೆಗೆ ಕಾರಣರಾದವರ ವಿರುದ್ಧ ಕಮೀಷನರ್ ಕಚೇರಿಗೆ ಭೇಟಿ ನೀಡಿ ನಟ ವಿದ್ಯಾಭರಣ್ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಮಾತನಾಡಿದ ನಟ ವಿದ್ಯಾಭರಣ್, ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಆಡಿಯೋ ಹರಿಬಿಡಲಾಗಿದೆ. ಇದು ಶುದ್ದ ಸುಳ್ಳು. ಆಡಿಯೋದಲ್ಲಿ ಹೇಳಿರುವಂತೆ ನಾನು ತಪ್ಪು ಮಾಡಿಲ್ಲ. ಇದರಿಂದ ನನ್ನ ಹಾಗೂ ಕುಟುಂಬದವರ ಘನತೆಗೆ ಧಕ್ಕೆಯಾಗಿದೆ. ಈ ಹಿನ್ನೆಲೆ ಆಡಿಯೋ ವೈರಲ್ ಮಾಡಿದವರ ವಿರುದ್ಧ ದೂರು ನೀಡಲಾಗಿದ್ದು, ಕಮೀಷನರ್ ಅವರು ಸುಬ್ರಮಣ್ಯಪುರ ಪೊಲೀಸರಿಗೆ ತನಿಖೆಗೆ ವಹಿಸಿದ್ದಾರೆ ಎಂದರು.