ರಾಜ್ಯದಲ್ಲಿ ಕಾವೇರಿ ಕಿಚ್ಚು ಹೆಚ್ಚಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರವಾಗಿ ಈಗಾಗಲೇ ರಾಜ್ಯದ ಹಲವೆಡೆ ಪ್ರತಿಭಟನೆ, ಬಂದ್ ನಡೆದಿದೆ. ಕನ್ನಡ ಚಿತ್ರರಂಗ ಕೂಡ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಇದೀಗ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಕೂಡ ಟ್ವೀಟ್ ಮೂಲಕ ಕಾವೇರಿ ಮೇಲೆ ಮೊದಲ ಹಕ್ಕು ನಮ್ಮದೇ ಎಂದು ತಿಳಿಸಿ, ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ನಟ ಉಪೇಂದ್ರ ಟ್ವೀಟ್: ನಟ ಉಪೇಂದ್ರ ಅವರು ಸಾಮಾಜಿಕ ಜಾಲತಾಣ ವೇದಿಕೆ X (ಹಿಂದಿನ ಟ್ವಿಟರ್) ನಲ್ಲಿ ಕನ್ನಡದ ಖ್ಯಾತ ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಬರಹವನ್ನು ಹಂಚಿಕೊಂಡಿದ್ದು, ಅದಕ್ಕೆ 'ಕಾವೇರಿ ವಿವಾದ' ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಜೊತೆಗೆ ಈ ಪೋಸ್ಟ್ಗೆ ಕೈಮುಗಿಯುವ ಎಮೋಜಿಯನ್ನೂ ಹಾಕಿಕೊಂಡಿದ್ದಾರೆ.
ಪೋಸ್ಟ್ನಲ್ಲಿ, ''ಯಾವುದೇ ಭೂಭಾಗಕ್ಕೆ ಅದರದ್ದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳು ಇರುತ್ತವೆ. ಅಲ್ಲಿನ ನೈಸರ್ಗಿಕ ಸಂಪತ್ತಿನ ಒಡೆತನ ಮತ್ತು ಅದರ ಮೊದಲ ಬಳಕೆಯ ಹಕ್ಕು ಆಯಾ ಪ್ರದೇಶದ ಜನಸಮುದಾಯದ್ದಾಗಿರುತ್ತದೆ. ಭೂಮಿಯ ಮೇಲಿನ ಖನಿಜ ಸಂಪತ್ತು, ಭೂಮಿಯ ಮೇಲಿನ ಅರಣ್ಯ ಉತ್ಪನ್ನಗಳು ಹೇಗೆ ಆಯಾ ಸರ್ಕಾರದ ಆಸ್ತಿಯೋ, ಹಾಗೆಯೇ ಆಪ್ರದೇಶದಲ್ಲಿ ಸುರಿಯುವ ಮಳೆ ಹಾಗೂ ಹರಿಯುವ ನೀರಿಗೂ ಆ ಪ್ರದೇಶದ ಜೀವ ವೈವಿಧ್ಯವೇ ಪ್ರಥಮ ಹಕ್ಕುದಾರ ಆಗಿರುತ್ತಾನೆ. ಹಾಗಾಗಿ ಕಾವೇರಿ ನೀರಿನ ಮೊದಲ ಹಕ್ಕು ನಿರ್ವಿವಾದವಾಗಿ ಕರ್ನಾಟಕ್ಕದ್ದೇ ಆಗಿರುತ್ತದೆ. ನಮ್ಮ ಅಗತ್ಯತೆಯನ್ನು ಪೂರೈಸಿದ ನಂತರವಷ್ಟೇ ಇತರರಿಗೆ ನೆರವಾಗುವ ಪ್ರಶ್ನೆ ಉದ್ಭವಿಸುತ್ತದೆ. -ಕೆ.ಪಿ ಪೂರ್ಣಚಂದ್ರ ತೇಜಸ್ವಿ'' ಎಂದು ಬರೆಯಲಾಗಿದೆ.