ತಮ್ಮ ಲವ್ ಸ್ಟೋರಿ ಮೂಲಕ ಗಮನ ಸೆಳೆಯುವ ಬಾಲಿವುಡ್ ಸ್ಟಾರ್ ದಂಪತಿ ರಿತೇಶ್ ದೇಶ್ಮುಖ್ ಮತ್ತು ಜೆನಿಲಿಯಾ. ಈ ಜೋಡಿ ಕೆಲ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇವರ ಇತ್ತೀಚಿನ ವೇದ್ ಸಿನಿಮಾ ಚಿತ್ರಮಂದಿರಗಳಲ್ಲಿ 100 ದಿನ ಪೂರೈಸಿದ್ದು, ಸಕ್ಸಸ್ ಖುಷಿಯಲ್ಲಿ ಚಿತ್ರತಂಡವಿದೆ. ಈ ಬಗ್ಗೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ನಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಕಿಚ್ಚ ಸುದೀಪ್, ''ಹೆಮ್ಮೆ ಮತ್ತು ಸಂತೋಷ ಆಗುತ್ತಿದೆ. ನನ್ನ ಸಹೋದರ ರಿತೇಶ್ ದೇಶ್ಮುಖ್ ಮತ್ತು ಜೆನಿಲಿಯಾ, ನೀವು ಎಲ್ಲದಕ್ಕೂ ಅರ್ಹರು, ಪಾರ್ಟಿ ಟೈಮ್'' ಎಂದು ಬರೆದುಕೊಂಡಿದ್ದಾರೆ. ಕಿಚ್ಚ ಸುದೀಪ್ ಅಲ್ಲದೇ ದೇಶದ ಹಲವು ನಟ ನಟಿಯರು ಚಿತ್ರತಂಡಕ್ಕೆ, ಸಿನಿಮಾದ ಪ್ರಮುಖ ತಾರಾಗಣಕ್ಕೆ ಅಭಿನಂದನೆ ತಿಳಿಸಿದ್ದಾರೆ.
ರಿತೇಶ್ ದೇಶ್ಮುಖ್ ಮತ್ತು ಜೆನಿಲಿಯಾ ಅಭಿನಯದ ವೇದ್ ಕಳೆದ ಡಿಸೆಂಬರ್ 30ಕ್ಕೆ ತೆರೆಕಂಡಿದೆ. ನಿನ್ನೆಗೆ (ಏಪ್ರಿಲ್ 8, ಶನಿವಾರ) 100 ದಿನ ಪೂರೈಸಿದೆ. ರಿತೇಶ್ ದೇಶ್ಮುಖ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ 75 ಕೊಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಅಲ್ಲದೇ ರಿತೇಶ್ ದೇಶ್ಮುಖ್ ನಿರ್ದೇಶನದಲ್ಲಿ ಮೂಡಿಬಂದ ಚೊಚ್ಚಲ ಚಿತ್ರವಿದು. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಖತ್ ಖುಷಿಯಲ್ಲಿದ್ದು, ಇತರೆ ಸೆಲೆಬ್ರಿಟಿಗಳು ಅಭಿನಂದನೆ ತಿಳಿಸಿದ್ದಾರೆ.
'ಅದ್ಭುತ, ಅಭಿನಂದನೆಗಳು' ಎಂದು ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ತಿಳಿಸಿದ್ದಾರೆ. 'ಅದ್ಭುತ, ನಿಮ್ಮಿಬ್ಬರಿಗೆ ಮತ್ತಷ್ಟು ಶಕ್ತಿ' ಎಂದು ನಟ ಸುನೀಲ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ಹೃತ್ಪೂರ್ವಕ ಅಭಿನಂದನೆಗಳು ಆತ್ಮೀಯ ಜೆನಿಲಿಯಾ ಮತ್ತು ಸಹೋದರ ರಿತೇಶ್, ಈ ಯಶಸ್ಸು ಸುಂದರವಾಗಿದೆ, ಇಡೀ ತಂಡಕ್ಕೆ ಹಾರ್ದಿಕ ಶುಭಾಶಯಗಳು ಎಂದು ತಮಿಳು ನಟ ಸೂರ್ಯ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮೊದಲು ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು ಎಂದು ರಿತೇಶ್ ದೇಶ್ಮುಖ್ ಪೋಸ್ಟರ್ ಹಂಚಿಕೊಂಡಿದ್ದರು. ಬಳಿಕ ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರ ಪ್ರೀತಿ, ಬೆಂಬಲಕ್ಕೆ ರಿತೇಶ್ ಧನ್ಯವಾದ ಸಲ್ಲಿಸಿದ್ದಾರೆ.