ಚಂದನವನದ ಲವ್ಲಿ ಸ್ಟಾರ್ ಪ್ರೇಮ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 1976 ರ ಏಪ್ರಿಲ್ 18 ರಂದು ಜನಿಸಿದ ಇವರು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟನೆಯಲ್ಲಿ ಆಸಕ್ತಿ ಹೊಂದಿದ್ದ ಇವರು 2004 ರಲ್ಲಿ ಪ್ರಾಣ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. 2005 ರಲ್ಲಿ ನೆನಪಿರಲಿ ಚಿತ್ರಕ್ಕಾಗಿ ಅತ್ಯುತ್ತಮ ನಟ ಫಿಲ್ಮ್ಫೇರ್ ಪ್ರಶಸ್ತಿಯನ್ನು ಮುಡಿಗೇರಿಸಕೊಂಡ ಬಳಿಕ ಹೆಚ್ಚು ಜನಪ್ರಿಯತೆ ಪಡೆದರು. ಬಳಿಕ ನೆನಪಿರಲಿ ಪ್ರೇಮ್ ಎಂದೇ ಖ್ಯಾತರಾದರು. ಈ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು. ಇವರ ನಟನೆಯನ್ನರಸಿ ಅನೇಕ ಪ್ರಶಸ್ತಿ, ಪುರಸ್ಕಾರಗಳು ಬಂದಿವೆ.
ಕನ್ನಡದ ಸ್ಫುರದ್ರೂಪಿ ನಟರಲ್ಲಿ ಪ್ರೇಮ್ ಕೂಡ ಒಬ್ಬರು. ಎಷ್ಟೇ ವರ್ಷ ಆದ್ರೂ ಚಿರ ಯುವಕನಂತೆ ಕಾಣಿಸುತ್ತಾರೆ. ಅವರು ಈಗ 47 ವರ್ಷ ಪೂರೈಸಿದ್ದಾರೆ ಅಂದ್ರೆ ಅವರ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಾರೆ. ಇವರ ಹುಟ್ಟುಹಬ್ಬದ ಸಲುವಾಗಿ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಹ್ಯಾಪಿ ಬರ್ತ್ಡೇ ಪ್ರೇಮ್ ಸರ್, ಯಾವಾಗಲೂ ಲವ್ಲಿಯಾಗಿರಿ ಎಂದು ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ.
ಪ್ರೇಮ್ ಸಿನಿಮಾಗಳಿವು..: ನಟ ಪ್ರೇಮ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಾಣ, ನೆನಪಿರಲಿ. ಜೊತೆ ಜೊತೆಯಲಿ, ಪಲ್ಲಕ್ಕಿ, ಗುಣವಂತ, ಹೊಂಗನಸು, ಗೌತಮ್, ಸವಿ ಸವಿ ನೆನಪು, ಜೊತೆಗಾರ, ಚೆಲುವೆಯೆ ನಿನ್ನ ನೋಡಲು, ಎರಡನೇ ಮದುವೆ, ಐ ಆಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ, ದನ್ ದನಾ ದನ್, ಚಾರ್ ಮಿನಾರ್, ಚಂದ್ರ, ಶತ್ರು, ಅತೀ ಅಪರೂಪ, ಫೇರ್ ಅಂಡ್ ಲವ್ಲಿ, ಮಳೆ ರಿಂಗ್ ರೋಡ್, ಮಸ್ತ್ ಮೊಹಬತ್, ಚೌಕ, ದಳಪತಿ, ಲೈಫ್ ಜೊತೆ ಒಂದು ಸೆಲ್ಫಿ ಹೀಗೆ ಅನೇಕ ಸಿನಿಮಾಗಳಲ್ಲಿ ನಟ ಪ್ರೇಮ್ ಅಭಿನಯಿಸಿದ್ದಾರೆ. ಅದರಲ್ಲೂ ಇವರ ಸಿನಿಮಾದ ಹಾಡುಗಳನ್ನಂತೂ ಜನರು ಗುನುಗುತ್ತಿರುತ್ತಾರೆ.